

ಮಂಡ್ಯ: ವಿವಿಧ ಟಿವಿ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸುವ ಸಂದರ್ಭ ಉತ್ಪ್ರೇಕ್ಷೆ ಮತ್ತು ವೈಭವೀಕರಣ ಮಾಡಲಾಗುತ್ತಿದೆ ಎಂದು ಬೆಂಗಳೂರು ವಿಜಯ ಸಂಜೆ ಕಾಲೇಜು ಸಹ ಪ್ರಾಧ್ಯಾಪಕ ಶಾಂತರಾಜು ಹೇಳಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಪಾರ್ವತಮ್ಮ ಪಿ.ಎನ್.ಜವರಪ್ಪಗೌಡ ಪತ್ರಿಕಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಶಿಕ್ಷಣ, ಆರೋಗ್ಯ, ಪತ್ರಿಕಾರಂಗಗಳು ಈ ಹಿಂದೆ ಸೇವಾ ಕ್ಷೇತ್ರಗಳಾಗಿದ್ದವು. ಆದರೆ ಇಂದು ಇವೆಲ್ಲವೂ ಉದ್ಯಮಗಳಾಗಿ ಬದಲಾಗಿವೆ. ಲಾಭ ನಷ್ಟದ ಲೆಕ್ಕಾಚಾರದಲ್ಲಿ ತೊಡಗಿವೆ ಎಂದು ಅವರು ಹೇಳಿದರು. ಒಂದು ಪತ್ರಿಕೆ ಸಮಾಜಕ್ಕೆ ಏನು ಕೊಡುಗೆ ನೀಡಬಹುದು ಎನ್ನುವುದನ್ನು ಜವರಪ್ಪಗೌಡ ಅವರು ತೋರಿಸಿಕೊಟ್ಟಿದ್ದರು ಎಂದವರು ವಿವರಿಸಿದರು.
ವಿಶ್ರಾಂತ ಕುಲಪತಿ ಕೆ.ಚಿದಾನಂದಗೌಡ ಮಾತನಾಡಿ, ಕುವೆಂಪು ಅವರ ಮನೆಯಿಂದ ಬಂದಿದ್ದಾರೆ ಎಂದು ಜವರಪ್ಪಗೌಡರು ನಮ್ಮನ್ನು ಅತ್ಯಂತ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು. ಅವರ ನೆನಪು ನಮ್ಮಲ್ಲಿ ಸದಾ ಹಸಿರಾಗಿದೆ. ಜವರಪ್ಪಗೌಡರ ಬಹುಮುಖಿ ಸೇವೆ ಮಾನ್ಯವಾಗಿದೆ. ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ದತ್ತಿ ದಾನಿ ಪಿ.ಜೆ.ಚೈತನ್ಯ ಕುಮಾರ, ಸಾಹಿತಿ ಎಚ್.ಎಸ್. ಮುದ್ದೇಗೌಡ, ಸಂಘದ ಕಾರ್ಯದರ್ಶಿ ಲೋಕೇಶ್ ಚಂದಗಾಲು ಇತರರಿದ್ದರು. ಪತ್ರಕರ್ತರಾದ ರಾಜು ಮತ್ತು ನಂಜೇಗೌಡ ಅವರಿಗೆ ಕುವೆಂಪು ಅವರ ಪುತ್ರಿ ತಾರಿಣಿ ಚಿದಾನಂದಗೌಡ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.