

ಮಂಡ್ಯ: ಸಾಮಾಜಿಕ ಸೇವೆ ಸಲ್ಲಿಸುವ ಯುವಜನರೆಲ್ಲರೂ ಒಟ್ಟಾಗಬೇಕು. ಈ ಮೂಲಕ ಒಂದು ದೊಡ್ಡ ಶಕ್ತಿಯಾಗಿ ರೂಪುಗೊಳ್ಳಬೇಕು ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಕಿವಿಮಾತು ಹೇಳಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಅವರಿಗೆ ಎಂ.ಶಿಲಿಂಗಯ್ಯ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸಮಾಜ ಸೇವೆ ಮಾಡುವವರು ಸಾಕಷ್ಟು ಜನ ಇದ್ದಾರೆ. ಆದರೆ ಅವರೆಲ್ಲರೂ ಬಿಡಿ ಬಿಡಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಸಮಾಜದ ಅಂಕು ಡೊಂಕು ತಿದ್ದಲು ಸಾಕಾಗುವುದಿಲ್ಲ. ಬದಲಿಗೆ ಎಲ್ಲರೂ ಒಗ್ಗಟ್ಟಾಗಬೇಕು. ಪರಿಣಾಮ ಸಮಾಜಕ್ಕೆ ಇನ್ನಷ್ಟು ಸೇವೆ ಸಲ್ಲಿಸಬಹುದು ಎಂದರು.
ಅಭಿನಂದನಾ ನುಡಿಗಳನ್ನಾಡಿದ ವಿಶ್ರಾಂತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರೇಗೌಡ, ಅನುಪಮಾ ಅವರು ಬಾಲ್ಯದಿಂದಲೇ ಮಾನವೀಯ ಗುಣಮವನ್ನು ಮೈಗೂಡಿಸಿಕೊಂಡಿದ್ದಾರೆ. ಅದನ್ನು ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸಮಾಜದಲ್ಲಿ ಪರುಷರಷ್ಟೇ ಸರಿಸಮಾನರಾಗಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಸಾಮಾನ್ಯ ವಿಷಯವಲ್ಲ. ಅದರಲ್ಲಿಯೂ ರಕ್ತದಾನದ ವಿಚಾರದಲ್ಲಿ ಸದಾ ಮುಂದಿರುತ್ತಾರೆ. ಜತೆಗೆ ಜನರನ್ನು ಜಾಗೃತಗೊಳಿಸುವ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜನೆ ಮಾಡಿಕೊಂಡು ಬರುತ್ತಿದ್ದಾರೆ. ಈ ಕಾರಣದಿಂದಲೇ ರಾಷ್ಟ್ರ ಯುವ ಪ್ರಶಸ್ತಿಯನ್ನು ಪಡೆದಿದ್ದಾರೆ. ಇತ್ತೀಚೆಗೆ ರೋಟರಿ ಅಧ್ಯಕ್ಷೆಯಾಗಿಯೂ ಸಾಕಷ್ಟು ಸಮಾಜಸೇವೆ ಮಾಡುವ ಮೂಲಕ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ವಿಚಾರವಾದಿ ಪ್ರೊ.ಜಿ.ಟಿ.ವೀರಪ್ಪ ಪ್ರಶಸ್ತಿ ಪ್ರದಾನ ಮಾಡಿದರು. ದತ್ತಿ ದಾನಿ ಎಂ.ಕೆ.ಲಕ್ಷ್ಮೀ, ಸಂಘದ ಕಾರ್ಯದರ್ಶಿಗಳಾದ ಲೋಕೇಶ್ ಚಂದಗಾಲು, ಎಚ್.ಡಿ.ಸೋಮಶೇಖರ್, ಖಜಾಂಚಿ ಮಂಜುಳಾ ಉದಯ್‌ಶಂಕರ್, ನಿರ್ದೇಶಕರಾದ ಹನಕೆರೆ ನಾಗಪ್ಪ, ಕೋಣನಹಳ್ಳಿ ಜಯರಾಂ ಇತರರಿದ್ದರು. ಇದೇ ವೇಳೆ ಬಿ.ಎಸ್.ಅನುಪಮಾ ಅವರಿಗೆ ಹತ್ತು ಸಾವಿರ ರೂ. ನಗದಿನ ಜತೆಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.