ಜಿಲ್ಲೆಯ ಅಭಿವೃದ್ಧಿಗೆ ಶ್ರಮ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ

Award Ceremony mandya
Published on

ಮಂಡ್ಯ: ಮಂಡ್ಯ ಇಡೀ ದೇಶದಲ್ಲಿ ರಾಜಕೀಯ, ಸಾಹಿತ್ಯ, ರೈತಪರ ಹಿನ್ನೆಲೆ ಹಾಗೂ ಕೃಷಿ ಸೇರಿದಂತೆ ಎಲ್ಲದರಲ್ಲೂ ಮುಂದಿದೆ. ಜಿಲ್ಲೆಯ ಹಿರಿಯ ನಾಯಕರು ವಿಧಾನಸೌಧಕ್ಕೆ ಬರುತ್ತಾರೆಂದರೆ ಮುಖ್ಯಮಂತ್ರಿ ಸೇರಿದಂತೆ ಸಚಿವರಾದಿಯಾಗಿ ಬಹಳ ಗೌರವ ಕೊಡುತ್ತಿದ್ದರು. ಏಕೋ ಗೊತ್ತಿಲ್ಲ ಜಿಲ್ಲೆ ಅಭಿವೃದ್ಧಿ ವಿಚಾರದಲ್ಲಿ ಮುಂದೆ ಹೋಗಿಲ್ಲ. ನಮ್ಮ ಶಕ್ತಿಮೀರಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹನಕೆರೆ ಎಂ.ಶ್ರೀನಿವಾಸ್ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅರಸಮ್ಮ-ಮೆಣಸೇಗೌಡ ಕೃಷಿ ಪ್ರಶಸ್ತಿ ಹಾಗೂ ಎಂ.ಶ್ರೀನಿವಾಸ್ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ನನ್ನ ಮತ್ತು ಎಂ.ಶ್ರೀನಿವಾಸ್ ಸಂಬಂಧ ಅಗಾಧವಾದುದು. ರೈತ ಸಂಘದಿಂದ ಬಂದ ಅವರು, ಎಸ್.ಡಿ. ಜಯರಾಂ ಕಾಲಾನಂತರ ಜನತಾದಳ ಸೇರಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾದರು. ಆದರೆ, ದುರದೃಷ್ಟವಶಾತ್ ಸಚಿವರಾಗಲು ಆಗಲಿಲ್ಲ ಎಂದು ವಿಷಾದಿಸಿದರು.

ಶ್ರೀನಿವಾಸ್ ಅವರು ಮೂಖ ಬಸವಣ್ಣ ಇದ್ದಂತೆ. ಅವರ ಬಗ್ಗೆ ಈ ಕ್ಷೇತ್ರದ ಜನ ಮಾತ್ರವಲ್ಲ, ನಾಯಕರೂ ಸಹ ಒಂದು ದೂರನ್ನೂ ನೀಡಿಲ್ಲ. ಅತ್ಯಂತ ಅಪರೂಪದ ವ್ಯಕ್ತಿತ್ವ. ಕೆಲ ಕಾರಣಗಳಿಂದ ರಾಜಕಾರಣದಿಂದ ದೂರವಿದ್ದು, ಮಂಡ್ಯ ಅಭಿವೃದ್ಧಿಗೋಸ್ಕರ ಕೆಲವು ಆಲೋಚನೆ ಮಾಡಬೇಕಾಗಿದೆ ಎಂದು ಸಲಹೆ ನೀಡಿದ ಅವರು, 35 ವರ್ಷದ ರಾಜಕೀಯ ಜೀವನದಲ್ಲಿ ನನ್ನಷ್ಟು ಸಮಸ್ಯೆ ಮತ್ತು ನೋವನ್ನು ಅನುಭವಿಸಿದ ರಾಜಕಾರಣಿ ಮತ್ತೊಬ್ಬ ಇಲ್ಲ. 1990 ರಿಂದ 1999ರ ವರೆಗೆ 10 ವರ್ಷ ರಾಜಕೀಯವಾಗಿ ಬಹಳ ನೋವನ್ನು ಅನುಭವಿಸಿದ್ದೇನೆ. ಇಂದು ಕೆಲವರು ವೀರಾವೇಷದಿಂದ ಮಾತಾಡುತ್ತಾರೆ. ಮಂಡ್ಯ ನನ್ನದು ಎನ್ನುತ್ತಾರೆ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಟೀಕಿಸಿದರು.

ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯಾ ಮಾತನಾಡಿ, ಜಾತಿ ಮತ್ತು ಹಣ ಬಲದಿಂದ ಎಲ್ಲವೂ ನಡೆಯಲ್ಲ. ಯಾರಿಗೆ ಮತ ನೀಡಬೇಕೆಂಬುದನ್ನು ಜನತೆ ಮೊದಲೇ ತೀರ್ಮಾನ ಮಾಡಿರುತ್ತಾರೆ. ಮಂಡ್ಯ ಜಿಲ್ಲೆಯ ಬಹಳ ಪ್ರಬುದ್ಧರು ಹಾಗೂ ಒಳ್ಳೆಯವರು. ಅಲ್ಲದೆ ಸತ್ಯದ ಪರವಾಗಿ ನಿಲ್ಲುವವರಾಗಿದ್ದಾರೆ. ಎಂದಿಗೂ ಜಾತಿ ಹಾಗೂ ಹಣದ ಹಿಂದೆ ಹೋದವರಲ್ಲ. ಮಂಡ್ಯ ಎಂದರೆ ಕೆ.ವಿ.ಶಂಕರಗೌಡ, ಕೆ.ವಿ.ಶಂಕರಗೌಡ ಎಂದರೆ ಮಂಡ್ಯ ಎನ್ನುವಂತಾಗಿದೆ. ಅದೇ ರೀತಿ ಕೆ.ವಿ.ಶಂಕರಗೌಡರು ಶಿಕ್ಷಣ ಕ್ಷೇತ್ರ ಹಾಗೂ ಸಹಕಾರ ಕ್ಷೇತ್ರಕ್ಕೆ ಕೊಡುಗೆ ನೀಡಿ ಹೋಗಿದ್ದಾರೆ ಎಂದು ಹೇಳಿದರು.

ಮಾಜಿ ಶಾಸಕ ಎಂ.ಶ್ರೀನಿವಾಸ್ ಅವರು ಕೆಲ ಕಾರಣಗಳಿಂದ ರಾಜಕಾರಣದಿಂದ ತಟಸ್ಥರಾಗಿದ್ದಾರೆ. ಸರಳ ಸಜ್ಜನಿಕೆ ರಾಜಕಾರಣಿ ಜತೆಗೆ ಧರ್ಮರಾಯನ ರೀತಿ ಇರುವ ನೀವು ಸಾರ್ವಜನಿಕ ಜೀವನದಲ್ಲಿ ಸದಾ ಇರಬೇಕು. ಅದನ್ನು ಮಂಡ್ಯ ಕ್ಷೇತ್ರದ ಜನತೆ ಬಯಸುತ್ತಿದ್ದಾರೆ. ಜಿಲ್ಲೆಯ ಹಿಂದಿನ ರಾಜಕಾರಣಿಗಳಿಗೆ ವಿವೇಕ ಎನ್ನುವುದು ಇತ್ತು. ಮಂಡ್ಯದಲ್ಲಿ ಧರಣಿ ನಡೆಯುತ್ತದೆ ಎಂದರೆ ರಾಜ್ಯ ಮಾತ್ರವಲ್ಲದೆ ಇಡೀ ದೇಶ ಮಂಡ್ಯ ಕಡೆ ಗಮನಕೊಡುತ್ತಿತ್ತು. ಆದರೆ, ಇಂದು ವಿವೇಕವುಳ್ಳ ನಾಯಕರು ಇಲ್ಲವಾಗಿದ್ದಾರೆ. ವಿವೇಕದ ನಾಯಕತ್ವವನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.

ಶಾಸಕ ರವಿಕುಮಾರ್ ಗಣಿಗ, ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ, ಬಿ.ರಾಮಕೃಷ್ಣ, ಮೈಸೂರು ಮಿತ್ರ ಫೌಂಡೇಷನ್ ಅಧ್ಯಕ್ಷ ವಿಜಯರಾಮೇಗೌಡ, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಮಾಜಿ ಸದಸ್ಯ ಎಚ್.ಎನ್.ಯೋಗೇಶ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಪ್ರತಿಷ್ಠಾನದ ಅಧ್ಯಕ್ಷ ಶಿವರಾಜು ಕೀಲಾರ ಇದ್ದರು.

ಇದೇ ಸಂದರ್ಭ ಎಂ.ಶ್ರೀನಿವಾಸ್ ಸಮಾಜ ಸೇವಾ ಪ್ರಶಸ್ತಿಯನ್ನು ಮೈಸೂರಿನ ತಲಕಾವೇರಿ ಮಹಿಳಾ ಶಿಕ್ಷಣ ಸಂಸ್ಥೆಯ ನಳಿನಿ ತಿಮ್ಮಯ್ಯ ಹಾಗೂ ಅರಸಮ್ಮ ಮೇಣಸೇಗೌಡ ಕೃಷಿ ಪ್ರಶಸ್ತಿಯನ್ನು ಕೆ.ಆರ್.ಪೇಟೆ ಪ್ರಗತಿಪರ ರೈತ ಎಂ.ವಿ.ರಾಜೇಗೌಡ ಅವರಿಗೆ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net