ಗ್ರಾಹಕರ ನ್ಯಾಯಾಲಯಕ್ಕೆ ಸೌಲಭ್ಯಗಳನ್ನು ಒದಗಿಸಿದ್ದೆ: ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ನೆನಪು

Award Ceremony mandya
Published on

ಮಂಡ್ಯ: ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಮಂಡ್ಯದವರೇ ಹೆಚ್ಚು ಕೆಲಸ ಮಾಡಿದ್ದಾರೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಹೇಳಿದರು.

ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಕರ್ನಾಟಕ ಸಂಘದ ವತಿಯಿಂದ ಏರ್ಪಡಿಸಿದ್ದ ಪ್ರಭಾವತಿ ಮತ್ತು ಎಚ್.ಹನುಮೇಗೌಡ ಕಾನೂನು ಸೇವಾ ಪ್ರಶಸ್ತಿ ಹಾಗೂ ಶಾರದಮ್ಮ ಮತ್ತು ಎಂ.ಎಲ್.ಸುಬ್ಬಣ್ಣ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾನೂನು ಸೇವಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಪ್ರಸ್ತುತ ಸಮಾಜದಲ್ಲಿ ಮಾತ್ರವಲ್ಲ, ಹಿಂದಿನಿಂದಲೂ ಲಂಚಾವತಾರದ ನಿದರ್ಶನಗಳಿವೆ. ರಾಜ್ಯ ಗ್ರಾಹಕರ ಪರಿಹಾರ ವೇದಿಕೆಯ ನ್ಯಾಯಾಧೀಶನಾಗಿದ್ದ ಅವಧಿಯಲ್ಲಿ ಸುಮಾರು 4 ಸಾವಿರದಷ್ಟು ವಿಚಾರಣೆಗೆ ಬಾರದ ಪ್ರಕರಣವನ್ನು ಕೈಬಿಟ್ಟಿದ್ದೆ. ಉಳಿದಂತೆ 17 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದೆ. ಆ ಸಂದರ್ಭದಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ಇಲ್ಲದ ಸೌಲಭ್ಯಗಳನ್ನು ಗ್ರಾಹಕರ ನ್ಯಾಯಾಲಯಕ್ಕೆ ಒದಗಿಸಿದ್ದೆ. ಹೀಗೆ ಕೆಲಸ ಮಾಡಿಸುವ ಸಂದರ್ಭ ಗುತ್ತಿಗೆದಾರ ಸರ್ ನಿಮಗೆಷ್ಟು ಕಮಿಷನ್ ಕೊಡಬೇಕು ಎಂದು ಕೇಳಿದ್ದ. ಇದಕ್ಕೆ ನೀನೆಷ್ಟು ಕೊಡುತ್ತೀಯಪ್ಪ ಎಂದೆ. ಆಗವನು ಹತ್ತು ಪಸೆರ್ಂಟ್ ಕೊಡ್ತೀನಿ ಸರ್ ಅಂದ. ಹಾಗಾದರೆ ನನಗೆ ಆ ಹತ್ತು ಪಸೆರ್ಂಟ್ ಕೊಡುವುದು ಬೇಡ. ಬದಲಿಗೆ ಗುಣಮಟ್ಟದ ಕೆಲಸ ಮಾಡೆಂದು ತಿಳಿಸಿದ್ದೆ ಎಂದು ಸ್ಮರಿಸಿದರು.

ಪ್ರಶಸ್ತಿ ಪುರಸ್ಕೃತರ ಕುರಿತು ಮಾತನಾಡಿದ ನಿವೃತ್ತ ಪ್ರೊ.ಎಸ್.ಬಿ.ಶಂಕರೇಗೌಡ, ಶೋಷಿತ ಜನರಿಗೆ ಒಂದು ರಕ್ಷಾ ಕವಚವಾಗಿ ದೇಶದ ನ್ಯಾಯಾಂಗ ತನ್ನ ಅಸ್ತಿತ್ವವನ್ನು ತೋರಿದೆ. ಹಾಗೆ ನಮ್ಮ ದೇಶದಲ್ಲಿ ಅತ್ಯಂತ ಶೋಷಿತರು ಎಂದರೆ ಗ್ರಾಹಕರು. ಈ ಕೊಳ್ಳುಬಾಕ ಸಂಸ್ಕೃತಿಯಲ್ಲಿ ಹೆಚ್ಚು ಶೋಷಣೆಗೊಳಗಾಗುತ್ತಿದ್ದಾರೆ. ಹಾಗಾಗಿ ಗ್ರಾಹಕರ ವ್ಯಾಜ್ಯಗಳನ್ನು ಪರಿಹರಿಸುವುದರಲ್ಲಿ ಚಂದ್ರಶೇಖರಯ್ಯ ಮುಂಚೂಣಿಯಲ್ಲಿದ್ದವರು ಎಂದು ಬಣ್ಣಿಸಿದರು.

ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಮೂರ್ತಿ ಇ.ಎಸ್.ಇಂದ್ರೇಶ್ ಪ್ರಶಸ್ತಿ ಪ್ರದಾನ ಮಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭಾವತಿ ಹನುಮೇಗೌಡ, ಎಂ.ಎಸ್.ಹರೀಶ್, ಪ್ರೊ.ರಾಮಲಿಂಗಯ್ಯ, ತಗ್ಗಹಳ್ಳಿ ವೆಂಕಟೇಶ್, ಲೋಕೇಶ್, ಹರೀಶ್ ಮತ್ತಿತರರಿದ್ದರು.

ಇದೇ ವೇಳೆ ರಾಮನಗರ ಜಿಲ್ಲೆ ಕನಕಪುರದ ಸಾಧಕ ಕೃಷಿಕ ಎಚ್.ಕೆ.ಶ್ರೀಕಂಠ ಅವರಿಗೆ ಶಾರದಮ್ಮ ಮತ್ತು ಎಂ.ಎಲ್.ಸುಬ್ಬಣ್ಣ ಕೃಷಿ ಪ್ರಶಸ್ತಿಯನ್ನು ನೀಡಿ ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net