

ಮಂಡ್ಯ: ಮೈಸೂರು ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದಿಂದ ಕರ್ನಾಟಕ ಸಂಘದಲ್ಲಿ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲು ಅನುಮತಿ ನೀಡಲಾಗುವುದು ಎಂದು ವಿವಿಯ ಕುಲಪತಿ ಡಾ.ನಾಗೇಶ್ ವಿ.ಬೆಟ್ಟಕೋಟೆ ಹೇಳಿದರು.
ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘ, ಎಂ.ಎಲ್.ಶ್ರೀಕಂಠೇಶಗೌಡ ಸಂಶೋಧನಾ ಕೇಂದ್ರದ ಆಯೋಜಿಸಿದ್ದ ಡಾ.ರಾಗೌ ಸಾಹಿತ್ಯ ಪ್ರಶಸ್ತಿ ಮತ್ತು ಕೆ.ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಗೀತ ಹಾಗೂ ಪ್ರದರ್ಶಕ ಕಲೆಗಳಿಗೆ ಉತ್ತೇಜನ ನೀಡಲು ನಿರ್ಧರಿಸಲಾಗಿದೆ ಎಂದರು.
ವಿವಿ ವತಿಯಿಂದ ಈ ಹಿಂದೆ ಹಲವು ಕಡೆ ಸಂಗೀತ-ಕಲೆಗಳ ಉತ್ತೇಜನಕ್ಕೆ ಕಾರ್ಯಕ್ರಮ ನೀಡಲಾಗುತ್ತಿತ್ತು. ಕರೊನಾ ಸಂದರ್ಭದಲ್ಲಿ ಸ್ಥಗಿತಗೊಂಡ ನಂತರ ಇದೀಗ ಕಳೆದ ಮಾರ್ಚ್‌ನಲ್ಲಿ ರಾಜ್ಯಪಾಲರು ಕಾರ್ಯಕ್ರಮ ಮುಂದುವರಿಸಲು ಅನುಮೋದನೆ ನೀಡಿದ್ದರೂ ಚುನಾವಣೆ ನಡೆದಿದ್ದರಿಂದ ವಿಳಂಬವಾಗಿತ್ತು. ಇನ್ನು ಮುಂದೆ ವಿವಿ ವತಿಯಿಂದ ಹಲವು ಕಡೆ ಸಂಗೀತ ಮತ್ತು ಪ್ರದರ್ಶಕ ಕಲೆಗಳ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ ತೆರೆಯಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಪ್ರಶಸ್ತಿ ಪುರಸ್ಕೃತರಾದ ತೈಲೂರು ವೆಂಕಟಕೃಷ್ಣ, ಡಾ.ಭೈರಮಂಗಲ ರಾಮೇಗೌಡ ಯುವ ಸಾಹಿತಿಗಳಿಗೆ ಉತ್ತೇಜನ ನೀಡುವ ರೀತಿಯಲ್ಲಿ ತಾವು ಸಹ ಹಲವಾರು ಕೃತಿಗಳನ್ನು ಹೊರತಂದಿರುವುದು ಅಭಿನಂದನೀಯ. ಡಾ.ರಾಗೌ ತಮ್ಮ ಸಾಹಿತ್ಯ ಕ್ಷೇತ್ರದ ಸೇವೆ ಹಾಗೂ ಬೋಧನೆಯಿಂದ ಅನೇಕ ಶಿಷ್ಯ ಕೋಟಿಯನ್ನು ಸಮಾಜಕ್ಕೆ ನೀಡಿದ್ದಾರೆ ಎಂದರು.
ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ಭೈರಮಂಗಲ ರಾಮೇಗೌಡ ಮಾತನಾಡಿ, ಕರ್ನಾಟಕ ಸಂಘ ಜಯಪ್ರಕಾಶಗೌಡರ ನೇತೃತ್ವದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅನೇಕ ಕಾರ್ಯಾಗಾರ ನಡೆಸುವುದರ ಜತೆಗೆ ಹಲವು ದತ್ತಿ ಪ್ರಶಸ್ತಿಗಳನ್ನು ಸ್ಥಾಪಿಸಿ ಸಾಧಕರನ್ನು ಗೌರವಿಸುತ್ತಾ ಬಂದಿದ್ದಾರೆ. ಕರ್ನಾಟಕ ಸಂಘದ ಸಾಧನೆ ಗಣನೀಯವಾಗಿದ್ದರೂ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡದಿರುವುದು ಬೇಸರ ತಂದಿದೆ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಹಿರಿಯ ವಿದ್ವಾಂಸ ಡಾ.ರಾಗೌ, ಕೆ.ಎಸ್.ಆನಂದ್, ಎಚ್.ಡಿ.ಸೋಮಶೇಖರ್, ಮಂಜುಳಾ ಉದಯಶಂಕರ್, ಪ್ರಾಧ್ಯಾಪಕಿ ಡಾ.ಕೆಂಪಮ್ಮ, ಉಪನ್ಯಾಸಕಿ ಅನಿತಾ ಉಪಸ್ಥಿತರಿದ್ದರು.
ಇದೇ ವೇಳೆ ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಅವರಿಗೆ ಕೆ.ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ ಹಾಗೂ ಡಾ.ಭೈರಮಂಗಲ ರಾಮೇಗೌಡ ಅವರಿಗೆ ಡಾ.ರಾಗೌ ಸಾಹಿತ್ಯ ಪ್ರಶಸ್ತಿಯನ್ನು ತಲಾ 15 ಸಾವಿರ ರೂ ನಗದಿನ ಜತೆಗೆ ಪ್ರದಾನ ಮಾಡಲಾಯಿತು.