

ಮಂಡ್ಯ: ಅನ್ಯ ಭಾಷೆಗಳ ದಬ್ಬಾಳಿಕೆಯಿಂದ ಕನ್ನಡವನ್ನು ರಕ್ಷಿಸಿಕೊಳ್ಳುವ ಮೂಲಕ ಭಾಷಾ ಬೆಳವಣಿಗೆಗೆ ನಾಂದಿಯಾಡಬೇಕಿದೆ ಎಂದು ಸಮ್ಮೇಳನಾಧ್ಯಕ್ಷ ಡಾ.ಸಿ.ಮರಯ್ಯ ಕರೆ ನೀಡಿದರು.
ಡಾ.ಜೀಶಂಪ ಸಾಹಿತ್ಯ ವೇದಿಕೆ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಫಿಲಂಸ್ ಸಹಯೋಗದೊಂದಿಗೆ ನಗರದ ಕರ್ನಾಟಕ ಸಂಘದ ಆವರಣದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಹತ್ತನೇ ಅಖಿಲ ಕರ್ನಾಟಕ ಕನ್ನಡ ಅಕ್ಷರ ಜಾತ್ರೆ, ವಿವಿಧ ಪ್ರಶಸ್ತಿ ಪ್ರದಾನ ಹಾಗೂ ಕಾವ್ಯ ಕೌಸ್ತುಭ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡವನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವುದಲ್ಲದೆ ದೇಶದಲ್ಲಿ ಕನ್ನಡ ಭಾಷೆಯನ್ನು ಚಿರಸ್ಥಾಯಿಯಾಗಿ ಉಳಿದುಕೊಳ್ಳುವಂತೆ ನೋಡಿಕೊಳ್ಳಬೇಕಾಗಿರುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಮಾತನಾಡಿ, ಸ್ವಾಮಿ ವಿವೇಕಾನಂದರ ಸಂದೇಶ ಸಮಾಜಕ್ಕೆ ಮಾದರಿ. ಬಹು ಸಂಸ್ಕೃತಿಯ ರಾಷ್ಟ್ರವಾದ ಭಾರತವು ವಿವಿಧತೆಯಲ್ಲಿ ಏಕತೆಯ ದೇಶವಾಗಿದ್ದು, ಈ ದೇಶ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾವೇನು ಕೊಟ್ಟಿದ್ದೇವೆ ಎನ್ನುವುದಷ್ಟೇ ಮುಖ್ಯ ಎಂದರು.
ಸಾಹಿತಿ ಸತೀಶ್ ಜವರೇಗೌಡ ಮಾತನಾಡಿ, ಕನ್ನಡ ಹೆಚ್ಚು ಮಾತನಾಡುವ ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯ ಉಳಿಸಿ, ಬೆಳೆಸುವ ಇಂತಹ ಕಾರ್ಯಕ್ರಮ ಹೆಚ್ಚಾಗಿ ನಡೆಯಬೇಕು. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ಯುವಕರ ಮೇಲಿದೆ. ಇಂದಿನ ಯುವ ಪೀಳಿಗೆ ಆಂಗ್ಲ ಭಾಷೆಗೆ ಜೋತು ಬಿದ್ದಿದ್ದಾರೆ. ಆಂಗ್ಲ ಭಾಷೆಯನ್ನು ಕಲಿಕೆಗೆ ಮೀಸಲಿಟ್ಟು, ಕನ್ನಡವನ್ನು ಹೆಚ್ಚು ಬೆಳೆಸುವ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಸಾಹಿತಿ ಡಾ.ಬಿ.ಸಿ.ವಿಜಯ್‌ಕುಮಾರ್, ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಬನ್ನಂಗಾಡಿ ಸಿದ್ದಲಿಂಗಯ್ಯ, ಪಾಂಡವಪುರ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಲುವೇಗೌಡ, ಡಾ.ಜೀಶಂಪ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಕೃಷ್ಣಸ್ವರ್ಣಸಂದ್ರ, ಕಾರ್ಯಾಧ್ಯಕ್ಷ ರಾಗಿಮುದ್ದನಹಳ್ಳಿ ನಾಗೇಶ್, ಪ್ರಧಾನ ಕಾರ್ಯದರ್ಶಿ ಮಂಗಲ ಶಿವಣ್ಣ ಇತರರಿದ್ದರು.