

ಮಂಡ್ಯ: ಜ್ಞಾನ ಸಂಪತ್ತು ಎಂಬುದು ಸುತ್ತಮುತ್ತಲ ಪ್ರದೇಶಗಳನ್ನೊಳಗೊಂಡಂತೆ ವಿಷಯ ಇರಬೇಕು. ಅಂತೆಯೇ ಓದುವವರು ಮತ್ತು ಸಾಧನೆ ಮಾಡುವವರು ಶಿಸ್ತು ಎನ್ನುವುದನ್ನು ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ಜಲಸಾರಿಗೆ ನಿಗಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಂ ರಾಯಪುರ ಅಭಿಪ್ರಾಯಪಟ್ಟರು.
ನಗರದ ಕೆವಿಎಸ್ ಭವನದಲ್ಲಿ ಕರ್ನಾಟಕ ಸಂಘ, ಎಂ.ಎಲ್.ಶ್ರೀಕಂಠೇಗೌಡ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕೇವಲ ಉದ್ಯೋಗ ಪಡೆದುಕೊಳ್ಳಲು ಮಾತ್ರ ಜ್ಞಾನ ಎಂದಿರಬಾರದು. ಸಾಧನೆ ಮಾಡಲು ಕೇವಲ ಒಂದು ದೃಷ್ಟಿಕೋನ ಇಟ್ಟುಕೊಂಡು ಸಾಧನೆ ಮಾಡುವುದು ಮುಖ್ಯವಾಗಬಾರದು. ಅದು ಎಲ್ಲ ಆಯಾಮಾಗಳನ್ನು ಒಳಗೊಂಡಂತಹ ವಿಷಯಗಳು ಸಾಧನೆಯಲ್ಲಿರಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಸಾಧಕರ ಪಾತ್ರ ದೊಡ್ಡದಿದೆ. ಅದರಂತೆ ಈ ಏಳು ಜನರು ಪ್ರಶಸ್ತಿ ಸ್ವೀಕಾರ ಮಾಡಿರುವುದು ಸಂತಸ ತಂದಿದೆ. ಇಲ್ಲಿ ಸಾಧಕರಿಗೆ ಸಾಧನೆ ಪ್ರಶಸ್ತಿ ಸಿಕ್ಕಿದೆ ಎಂಬುದು ಗಮನಾರ್ಹವಾಗಿದೆ. ಇಂತಹ ಸಾಧನೆಗಳು ಸಮಾಜದಲ್ಲಿ ಹೆಚ್ಚಬೇಕಿದ್ದು, ಈ ನಿಟ್ಟಿನಲ್ಲಿ ಕರ್ನಾಟಕ ಸಂಘವು ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದೆ ಎಂದು ತಿಳಿಸಿದರು.
ನಿರೂಪಕಿ ಲೇಖಕಿ ಭವಾನಿ ಲೋಕೇಶ್ ಅಭಿನಂದನಾ ನುಡಿಗಳನ್ನಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ, ಸಾಹಿತಿ ಡಾ.ರಾಗೌ ಭಾಗವಹಿಸಿದ್ದರು.
ಇದೇ ವೇಳೆ ಮ.ರಾಮಕೃಷ್ಣ(ಡಾ.ರಾಗೌ ಸಾಹಿತ್ಯ ಪ್ರಶಸ್ತಿ), ಪ್ರೊ.ಜಯಪ್ರಕಾಶ ಮಾವಿನಕುಳಿ(ಕೆ.ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ), ಡಾ.ಎಂ.ಎನ್.ತಿಮ್ಮೇಗೌಡ(ವೈ.ಕೆ.ರಾಮಯ್ಯ ಕೃಷಿ ತಜ್ಞ), ಸೊಂದಲಗೆರೆ ಲಕ್ಷ್ಮೀಪತಿ(ವೈ.ಕೆ.ರಾಮಯ್ಯ ಕೃಷಿ ತಜ್ಞ), ಎಸ್.ಬಿ.ರಾಜೇಗೌಡ(ಎನ್.ಆರ್.ರಂಗಯ್ಯ ಸಹಕಾರ ಪ್ರಶಸ್ತಿ), ಡಾ.ಎಸ್.ಸುಹಾಸಿನಿ(ಸಿ.ಗೌರಮ್ಮ ಚಿಕ್ಕಣ್ಣ ಸಮಾಜ ಸೇವಾ ಪ್ರಶಸ್ತಿ), ಬಿ.ಟಿ.ಚಂದ್ರಕಾಂತಾ(ಸಿ.ಸುವರ್ಣಾ ಎಂ.ಪುಟ್ಟಸ್ವಾಮಿ ಶೈಕ್ಷಣಿಕ) ಪ್ರಶಸ್ತಿ ನೀಡಿ ಗೌರವಿಸಲಾಯಿತು.