

ಮಂಡ್ಯ: ಇತ್ತೀಚೆಗೆ ಚಲನಚಿತ್ರ ನಾಯಕ ನಟರ ಪೈಕಿ ಕೆಲವರು ದುರಹಂಕಾರದ ವರ್ತನೆ ತೋರಿಸುತ್ತಿದ್ದಾರೆ ಎಂದು ಬಿಜೆಪಿ ಮಾಜಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್ ಬೇಸರ ವ್ಯಕ್ತಪಡಿಸಿದರು.
ನಗರದ ಗಾಂಧಿಭವನದಲ್ಲಿ ಸಂಸ್ಕೃತಿ ಸೌರಭ ಟ್ರಸ್ಟ್ ರಾಮನಗರದಿಂದ ಆಯೋಜಿಸಿದ್ದ ಅಂದಿನ ಚಲನಚಿತ್ರ ಸಾಹಿತ್ಯ-ಸಂಗೀತ ವೈಭವ-ಹಾಡು ಹಳೆಯದಾದರೇನು, ಜನಪ್ರಿಯ ಕನ್ನಡ ಹಳೆಯ ಚಿತ್ರಗೀತೆಗಳ ಗಾಯನ ಹಾಗೂ ಡಾ.ರಾಜ್‌ಕುಮಾರ್ ಅವರ ಮೇರು ಅಭಿಮಾನಿ ಎಂ.ಜೆ.ನಾಗರಾಜುಗೆ ಅಭಿಮಾನಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಂಗಭೂಮಿಯಿಂದ ಬೆಳೆದು ಮೇರುನಾಯಕ ನಟರಾದ ಡಾ.ರಾಜ್‌ಕುಮಾರ್ ಅವರು ಎಷ್ಟು ವಿನಯ, ವಿನಮ್ರತೆಯಿಂದ ನಡೆದುಕೊಳ್ಳುತಿದ್ದರು. ಆದರೆ ಈ ಕಾಲದ ಚಲನಚಿತ್ರ ನಾಯಕ ನಟರು ದುರಹಂಕಾರದಲ್ಲೇ ನಡೆದುಕೊಳ್ಳುತ್ತಿದ್ದಾರೆ. ಡಾ.ರಾಜ್‌ಕುಮಾರ್ ಅವರ ಚಲನಚಿತ್ರಗಳು ಮತ್ತು ಸಾಹಿತ್ಯ ಪ್ರತಿಯೊಬ್ಬರಿಗೂ ಮಾರ್ಗದರ್ಶನ ನೀಡುವಂತೆ ಇವೆ. ಸಾಹಿತ್ಯವನ್ನು ಕೇಳುತ್ತಿದ್ದರೆ ರೋಗಮುಕ್ತ ಜೀವನ-ನೆಮ್ಮದಿ ಲಭ್ಯವಾಗುತ್ತದೆ. ಆದರೆ ಇಂದಿನ ಕೆಲವು ಸಾಹಿತ್ಯ-ಸಂಗೀತ ವಾಗಕರಿಕೆ ಬರುವಷ್ಟು ಅಸಹ್ಯಕರವಾಗಿರುತ್ತವೆ ಎಂದು ತಿಳಿಸಿದರು.
ರಾಜ್ಯ ಶ್ರೀಗಂಧ, ರಕ್ತಚಂದನ ಬೆಳೆಗಾರರ ಮಂಡಳಿ ನಿರ್ದೇಶಕ ಕನ್ನಡ ಕುಮಾರ್ ಮಾತನಾಡಿ, ಇಂದಿನ ಯುವ ಪೀಳಿಗೆ ಶ್ರೀಗಂಧ, ರಕ್ತಚಂದನ ಮರಗಳನ್ನು ಬೆಳೆಸಿ, ಅಧಿಕ ಆದಾಯ ಬರುವಂತ ಬೆಳೆಗಳನ್ನು ಬೆಳೆಯಿರಿ ಎಂದು ಸಲಹೆ ನೀಡಿದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಂ.ಸಿ.ಲಂಕೇಶ್ ಮಾತನಾಡಿದರು. ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜೈ ಕರ್ನಾಟಕ ಪರಿಷತ್ ನಗರ ಅಧ್ಯಕ್ಷೆ ಲಲಿತಾ, ಸಂಸ್ಕೃತಿ ಸೌರಭ ಟ್ರಸ್ಟ್ ಅಧ್ಯಕ್ಷ ಡಾ.ರಾ.ಬಿ.ನಾಗರಾಜ್, ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ಶ್ಯಾಮ್‌ಸುಂದರ್ ಇತರರಿದ್ದರು. ಇದೇ ಸಂದರ್ಭದಲ್ಲಿ ಗಾಯಕರಾದ ಮೈಸೂರು ಕೃಷ್ಣಮೂರ್ತಿ, ರಾಘವೇಂದ್ರ, ಎಸ್.ರಘುನಾಥ್, ಡಾ.ರಾ.ಬಿ.ನಾಗರಾಜ್, ಹೇಮಾ ಹಳೆಯ ಗೀತೆಗಳನ್ನು ಹಾಡಿ ರಂಜಿಸಿದರು.