ಜೀವ ಉಳಿಸುವ ವೈದ್ಯರನ್ನು ಅವಮಾನಿಸುವುದು ಸರಿಯಲ್ಲ: ಚುಂಚಶ್ರೀ ಡಾ.ನಿರ್ಮಲಾನಂದನಾಥಸ್ವಾಮೀಜಿ ಹೇಳಿಕೆ

1 (2)
Published on

ಮಂಡ್ಯ: ವೈದ್ಯರನ್ನೇ ಗುರಿಯಾಗಿಸಿಕೊಂಡು ನಡೆಸುತ್ತಿರುವ ದಾಳಿ ಮತ್ತು ಹಲ್ಲೆಗಳು ಬೇಸರ ತರಿಸುತ್ತವೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ವಿಷಾದಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ಮೈಸೂರು ಹಾಗೂ ಮಂಡ್ಯ ಶಾಖೆಯಿಂದ ಆಯೋಜಿಸಿದ್ದ ಸಾಧಕ ವೈದ್ಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಯಾವುದೇ ವೈದ್ಯರು ರೋಗಿ ಸಾಯಬೇಕೆಂದು ಬಯಸುವುದಿಲ್ಲ. ಅದೇ ರೀತಿ ಯಾವ ತಾಯಿಯೂ ತನ್ನ ಮಗುವನ್ನು ಗರ್ಭದಲ್ಲೇ ಸಾಯಿಸುವುದೂ ಇಲ್ಲ. ದುಶ್ಚಟಗಳಿಗೆ ದಾಸರಾಗಿ, ಕೆಟ್ಟ ಆಹಾರ ಪದ್ಧತಿಯಿಂದ ನಮ್ಮ ಆರೋಗ್ಯವನ್ನು ನಾವೇ ಕೆಡಿಸಿಕೊಂಡು ಇನ್ನೇನು ಅವನನ್ನು ಉಳಿಸಿಕೊಳ್ಳಲಾಗದ ಪರಿಸ್ಥಿತಿಗೆ ಬಂದಾಗ ವೈದ್ಯರೂ ಏನೂ ಮಾಡಲಾಗುವುದಿಲ್ಲ. ವೈದ್ಯರು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಅವರಿಗೂ ಸಾಂಸಾರಿಕ ಜೀವನವಿರುತ್ತದೆ. ಇದರ ನಡುವೆಯೂ ಉತ್ತಮ ವೈದ್ಯಕೀಯ ಚಿಕಿತ್ಸೆಯೊಂದಿಗೆ ರೋಗಿಯ ಪ್ರಾಣ ಉಳಿಸಲು ಹೋರಾಟ ನಡೆಸುತ್ತಿರುವವರನ್ನು ಅವಮಾನಿಸಬಾರದು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಮಿಮ್ಸ್ ಆಸ್ಪತ್ರೆಯನ್ನು 450 ಹಾಸಿಗೆಗಳಿಂದ 850 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಸಂಬಂಧ ಶುಕ್ರವಾರ ಬೆಂಗಳೂರಿನಲ್ಲಿ ಶಾಸಕರೆಲ್ಲರ ಸಮ್ಮುಖದಲ್ಲಿ ಎರಡೂವರೆ ಗಂಟೆ ಚರ್ಚೆಯಾಗಿದೆ. ಶೀಘ್ರದಲ್ಲೇ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸುವುದಾಗಿ ಹೇಳಿದರು.

ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ವಿಶ್ವವಿದ್ಯಾನಿಲಯ ಉಪಕುಲಪತಿ ಡಾ.ಎಂ.ಎ.ಶೇಖರ್, ಇನ್‌ಸ್ಟಿಟ್ಯೂಟ್ ಆ್ ಗ್ಯಾಸ್ಟ್ರೋಎಂಟರಾಲಜಿಸೈನ್ಸಸ್ ಮತ್ತು ಅರ್ಣಿನ್ ಟ್ರಾನ್ಸ್‌ಪ್ಲಾಂಟ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಡಾ.ಎನ್.ಎಸ್.ನಾಗೇಶ್, ಮೈಸೂರು ಜಯದೇವ ಆಸ್ಪತ್ರೆ ಪ್ರಾಧ್ಯಾಪಕ ಡಾ.ಕೆ.ಎಸ್.ಸದಾನಂದ, ಜಿಲ್ಲಾ ಎಸ್ಪಿ ಎನ್.ಯತೀಶ್, ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ಅಧ್ಯಕ್ಷ ಡಿ.ರವಿಕುಮಾರ್, ಮಂಡ್ಯ ಅಧ್ಯಕ್ಷ ಎ.ಸಿ.ರಮೇಶ್ ಇತರರಿದ್ದರು.

ಇದೇ ವೇಳೆ ವೈದ್ಯರಾದ ಡಾ.ಎಂ.ಆರ್.ಹರೀಶ್, ಡಾ.ಕೆ.ಎಂ.ಶಿವಕುಮಾರ್, ಡಾ.ಬಿ.ಎಸ್.ಪ್ರಮೀಳಾ, ಡಾ.ಪುಣ್ಯವತಿ ಸಿ.ನಾಗರಾಜು, ಡಾ.ಎಚ್.ಎಸ್.ರವಿಕುಮಾರ್, ಡಾ.ಬಿ.ಜೆ.ಕೀರ್ತಿ, ಡಾ.ಶಶಾಂಕ ಪಿ.ಕುಮಾರ್, ಡಾ.ವಿ.ಆರ್.ಮೋಹನ್‌ಕುಮಾರ್, ಡಾ.ಕೆ.ಎಸ್.ಜಯರಾಂ ಮತ್ತು ಡಾ.ಎಚ್.ವಿ.ಶುಶ್ರೂತ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net