ಸಾಧಕರ ಸಂದೇಶಗಳೇ ಸಾಧನೆಗೆ ದಾರಿದೀಪ: ಲಯನ್ಸ್ ಸಂಸ್ಥೆಯ ಮಾಜಿ ಗವರ್ನರ್ ಡಾ.ನಾಗರಾಜು ವಿ.ಭೈರಿ ಹೇಳಿಕೆ

Award ceremony for best teachers mandya
Published on

ಮಂಡ್ಯ: ಸರ್ವಪಲ್ಲಿ ರಾಧಾಕೃಷ್ಣನ್, ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಬಿ.ಸಿ.ರಾಯ್ ಸೇರಿದಂತೆ ಹಲವು ಸಾಧಕರು ಸಮಾಜಕ್ಕೆ ನೀಡಿದ ಸಂದೇಶಗಳು ಸಾಧನೆ ಮಾಡಲು ದಾರಿದೀಪವಾಗುತ್ತದೆ ಎಂದು ಲಯನ್ಸ್ ಸಂಸ್ಥೆಯ ಮಾಜಿ ಗವರ್ನರ್ ಡಾ.ನಾಗರಾಜು ವಿ.ಭೈರಿ ಹೇಳಿದರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಸಕ್ಕರೆನಾಡು ಲಯನ್ಸ್ ಸಂಸ್ಥೆಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ, ಹತ್ತನೇ ತರಗತಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಕನ್ನಡ ಶಿಕ್ಷಕರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ಶಿಕ್ಷಣ ಶೇ.18ರಷ್ಟಿತ್ತು. ಆದರೆ ಈಗ ಶೇ.80ರಷ್ಟು ಇದೆ. ಇದು ದೇಶದ ಪ್ರಗತಿಯನ್ನು ತೋರಿಸುತ್ತದೆ. ಶಿಕ್ಷಕರು ವಿದ್ಯಾರ್ಥಿಗಳ ಬದುಕನ್ನು ಹಸನು ಮಾಡುವ ನಿಟ್ಟಿನಲ್ಲಿ ಕೌಶಲ, ನೈತಿಕ ಮೌಲ್ಯ ಸೇರಿದಂತೆ ರಚನಾತ್ಮಕ ಕಲಿಕೆ ಹೆಚ್ಚಿಸಬೇಕು. ವಿದ್ಯಾರ್ಥಿಗಳು ಹತ್ತನೇ ತರಗತಿಯಲ್ಲಿರುವಾಗಲೇ ಮುಂದಿನ ಹಂತದಲ್ಲಿ ಯಾವ ಕೋರ್ಸ್ ತೆಗೆದುಕೊಳ್ಳಬೇಕು ಎಂದು ಅರಿಯಬೇಕು ಎಂದು ಸಲಹೆ ನೀಡಿದರು.

ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಮಾತನಾಡಿ, ಸಾವಿತ್ರಿಬಾಯಿ ಪುಲೆ ಮತ್ತು ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಣಕ್ಕೆ ನೀಡಿದ ಕೊಡುಗೆಯನ್ನು ಭೂಮಿ ಇರುವವರೆಗೆ ಮರೆಯಲು ಸಾಧ್ಯವಿಲ್ಲ. ಎಲ್ಲ ಶಿಕ್ಷಕರು ಅವರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು. ಅಲ್ಲದೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಶಿಕ್ಷಣ ಇಲಾಖೆಯಲ್ಲಿ ಅರ್ಜಿ ಹಾಕಿ ಶಿಕ್ಷಕ ಪ್ರಶಸ್ತಿ ಪಡೆಯಬೇಕು. ಆದರೆ ಲಯನ್ಸ್ ಸಂಸ್ಥೆಗಳು ಆದರ್ಶ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಸರ್ಕಾರ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವ ಜತೆಗೆ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಮಂಡ್ಯ ಸಕ್ಕರೆನಾಡು ಲಯನ್ಸ್ ಕ್ಲಬ್ ಅಧ್ಯಕ್ಷ ಮುದ್ದನಘಟ್ಟ ಮಹಾಲಿಂಗೇಗೌಡ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಷಯ ಪರಿವೀಕ್ಷಕ ಎಚ್.ಎಂ.ನಾಗೇಂದ್ರ ಮೂರ್ತಿ, ಖಜಾಂಚಿ ಕೆ.ಎಸ್.ಚಂದ್ರಶೇಖರ, ಕೆ.ಆರ್.ಶಶಿಧರ ಈಚಗೆರೆ, ಕೆ.ಎಸ್.ರಾಮಸಂಜೀವಯ್ಯ, ರಾಘವೇಂದ್ರ, ಸಿದ್ದೇಗೌಡ ಇದ್ದರು

ಇದೇ ಸಂದರ್ಭದಲ್ಲಿ 21 ಜನ ಶಿಕ್ಷಕರಿಗೆ ಜಿಲ್ಲಾಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಂತೆಯೇ ಹತ್ತನೇ ತರಗತಿ ಕನ್ನಡ ವಿಷಯದಲ್ಲಿ 125 ಅಂಕ ಪಡೆದ ಮಂಡ್ಯ ಉತ್ತರ ವಲಯದ 80 ವಿದ್ಯಾರ್ಥಿಗಳು ಹಾಗೂ 25 ಶಾಲೆಗಳ ಕನ್ನಡ ಭಾಷಾ ಶಿಕ್ಷಕರನ್ನು ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net