

ಮಂಡ್ಯ: ಕಲೆ, ಸಾಹಿತ್ಯ, ಸಂಸ್ಕೃತಿ ಪೋಷಣೆ ಆಗುವುದಿಲ್ಲವೋ ಅಂತಹ ಸಮಾಜವು ವಿನಾಶದ ಕಡೆಗೆ ಸಾಗುತ್ತದೆ ಎಂದು ವಿಚಾರವಾದಿ ಹುಲ್ಕೆರೆ ಮಹದೇವು ಹೇಳಿದರು.
ನಗರದ ಗಾಂಧಿಭವನದಲ್ಲಿ ಸಿಂಧುಶ್ರೀ ಕಲಾ ಸಂಸ್ಥೆ, ಸಂಧ್ಯಾ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಹಿರಿಯ ಮತ್ತು ಕಿರಿಯ ಕಲಾವಿದರ ಹಾಗೂ ಸಾಹಿತ್ಯಗಳ ಸಮಾಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಂಸ್ಕೃತಿಕ ವ್ಯಕ್ತಿತ್ವ ಮನುಷ್ಯರಲ್ಲಿ ಮಾನವೀಯತೆ ಮತ್ತು ಸಮಾನತೆಯ ಭಾವನೆ ಅರಳಿಸುತ್ತದೆ. ಸಮಾಜಕ್ಕೆ ಸ್ಪಂದಿಸುವ ಗುಣವನ್ನು ಬೆಳೆಸುತ್ತದೆ. ನಾವೆಲ್ಲರೂ ಸುಸಂಸ್ಕೃತರಾಗಿ ಬಾಳಬೇಕು. ಇತ್ತೀಚಿನ ವರ್ಷಗಳಲ್ಲಿ ಗುಣಮಟ್ಟದ ಅಥವಾ ಕಾಡುವ ಸಾಹಿತ್ಯದ ರಚನೆಯ ಪ್ರಮಾಣ ಕಡಿಮೆ ಆಗುತ್ತಿದೆ. ಸಾಹಿತಿಗಳು ಅಧ್ಯಯನದ ಜತೆಗೆ ವಿಶಾಲ ಭಾವನೆಯನ್ನ ರೂಢಿಸಿಕೊಂಡಾಗ ಮಾನವತಾವಾದದ ಬರವಣಿಗೆ ಸೃಷ್ಟಿಯಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆಯ ಜಿಲ್ಲಾಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಸೈದ್ಧಾಂತಿಕವಾಗಿ ನಡೆಯುತ್ತಿರುವ ಎಡ ಮತ್ತು ಬಲದ ಸಂಘರ್ಷದ ನಡುವೆ ವಾಸ್ತವ ಸಂಗತಿಗಳು ದೂರಾಗುತ್ತಿವೆ. ಪ್ರಚಲಿತ ವಿದ್ಯಮಾನಗಳಿಗೆ ಸ್ಪಂದಿಸದ ಸಾಹಿತ್ಯ ಜಡವಾಗಿ ಉಳಿಯುತ್ತದೆ. ಸಾಹಿತಿಗಳಲ್ಲಿ ಸದಾ ಸಾಮಾಜಿಕ ಸ್ಪಂದನೆಯ ಮನೋಭಾವನೆ ಇರಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಯುವ ಬರಹಗಾರ ಬಳಗದ ಅಧ್ಯಕ್ಷ ಸತೀಶ್ ಜವರೇಗೌಡ ಅಧ್ಯಕ್ಷತೆ ವಹಿಸಿದ್ದರು. ರಂಗಭೂಮಿ ಕಲಾವಿದರಾದ ಕಾಳೇನಹಳ್ಳಿ ಕೆಂಚೇಗೌಡ, ಬಸವರಾಜು ಸಂಪಹಳ್ಳಿ, ಮಾರ್ಕಾಲು ದೇವರಾಜು, ಡಾ.ಮನೋಹರ್, ಕಾನೂನು ಶಿಕ್ಷಕ ಕೆ.ಎಸ್.ಜಯಕುಮಾರ್, ರೇಷ್ಮೆ ಕೃಷಿಕ ಗರಕಹಳ್ಳಿ, ಕವಿ ಕಲ್ಕುಣಿ ಲೋಕೇಶ್, ಟ್ರಸ್ಟ್ ಅಧ್ಯಕ್ಷ ಹೆಮ್ಮಿಗೆ ಶಿವಣ್ಣ ಇತರರಿದ್ದರು.