ಸಮುದಾಯದ ಪರ ದುಡಿದರೆ ಅಭಿವೃದ್ಧಿ: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸಲಹೆ

Award ceremony for achievers mandya
Published on

ಮಂಡ್ಯ: ಜಾತಿ ಪ್ರಚೋದನೆಗಳಿಗೆ ಒಳಗಾಗದೇ ಅಭಿಮಾನವನ್ನಿಟ್ಟುಕೊಂಡು ಸಮುದಾಯದ ಪರವಾಗಿ ದುಡಿಯಬೇಕು. ಆಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು ಹೇಳಿದರು.

ನಗರದ ಗಾಂಧಿಭವನದಲ್ಲಿ ಒಕ್ಕಲಿಗರ ಸೇವಾ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ದಿವಂಗತ ನಾಗಣ್ಣ ಬಾಣಸವಾಡಿ ಮತ್ತು ದಿವಂಗತ ಶಿವಣ್ಣ ಸ್ಮರಣಾರ್ಥ ಸಾಧಕರಿಗೆ ಸನ್ಮಾನ, ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಒಂದು ಹಣ್ಣಿನ ಮರ ಪ್ರಾಣಿ, ಪಕ್ಷಿ ಹಾಗೂ ಮನುಷ್ಯರಿಗೆ ಯಾವುದೇ ಭೇದವಿಲ್ಲದೆ ಫಲ ನೀಡುವಂತೆ, ಒಕ್ಕಲಿಗರ ವಿದ್ಯಾರ್ಥಿಗಳು ಸಾಧನೆ ಮಾಡಿ ಸಮಾಜದ ಎಲ್ಲ ಸಮುದಾಯದ ಜನರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು. ನಿಮ್ಮ ಬಳಿ ಬರುವವರ ಜಾತಿ ಕೇಳದೆ ಅವರಿಗೆ ಸಹಾಯ ಮಾಡಿ ಎಂದು ತಿಳಿಸಿದರು.

ನಮ್ಮ ಜಿಲ್ಲೆಯ ಕೆಲವು ರೈತರು ಕಬ್ಬು, ಭತ್ತ ಮಾರಿ ಲಕ್ಷಾಂತರ ರೂ.ಗಳನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೇರೆ ಜಿಲ್ಲೆಯ ಕಾಲೇಜುಗಳಿಗೆ ಸುರಿಯುತ್ತಿದ್ದಾರೆ. ಆದ್ದರಿಂದ ಒಕ್ಕಲಿಗರ ಸಂಘದವರು ಜಿಲ್ಲೆಯಲ್ಲಿ ಒಳ್ಳೆಯ ಕಾಲೇಜನ್ನು ನಿರ್ಮಿಸಿ ಹೆಣ್ಣು ಮಕ್ಕಳು ಸೇರಿದಂತೆ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಸೌಲಭ್ಯ ಕಲ್ಪಿಸಿ ನೆರವಾಗಬೇಕು. ಜತೆಗೆ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವನ್ನು ತೆರೆದು ನೀಟ್ ತರಬೇತಿ ಕೊಡಿಸಬೇಕು ಎಂದು ಸಲಹೆ ನೀಡಿದರು.

ಕಾಲೇಜುಗಳನ್ನು ಹುಡುಕಿಕೊಂಡು ಉಡುಪಿ, ಮಂಗಳೂರು, ಕಾರ್ಕಳ, ಮೈಸೂರಿನ ಕಡೆ ಹೋಗುವುದು ಏಕೆ ಎನ್ನುವುದು ಅರ್ಥವಾಗುತ್ತಿಲ್ಲ. ನಮ್ಮ ಸಮುದಾಯದಲ್ಲಿ ಜ್ಞಾನಿಗಳು ಎಲ್ಲ ಕ್ಷೇತ್ರದಲ್ಲಿಯೂ ಸಾಧಿಸಿ ತೋರಿಸಿದ್ದಾರೆ. ಮಕ್ಕಳಲ್ಲಿ ಕೀಳರಿಮೆ ಋಣಾತ್ಮಕ ಮನೋಭಾವ ಬೆಳೆಸದೆ ಅವರ ಪ್ರತಿಭೆ ಬೆಳೆಸುವ ಕೆಲಸ ಮಾಡಬೇಕು. ಮಕ್ಕಳು ಯಾವಾಗಲೂ ಪಾಲಕರನ್ನೇ ಅವಲಂಬಿಸುವಂತಾಗಬಾರದು, ಬದಲಿಗೆ ಮಕ್ಕಳನ್ನು ಸ್ವತಂತ್ರವಾಗಿ ಬಿಡಬೇಕು ಎಂದರು.

ಆದಿಚುಂಚನಗಿರಿ ಕೊಮ್ಮೇರಹಳ್ಳಿ ಶಾಖಾ ಮಠದ ಮುಖ್ಯಸ್ಥ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಮಾತನಾಡಿ, ಒಕ್ಕಲಿಗರ ಮಠಗಳು ಧರ್ಮ, ಜಾತಿ ನೋಡದೇ ಸಮಾನವಾಗಿ ಶಿಕ್ಷಣ ನೀಡುವ ಮೂಲಕ ದೇಶ ಮತ್ತು ವಿದೇಶಗಳಲ್ಲಿ ಹೆಸರು ಮಾಡಿದೆ, ಒಕ್ಕಲಿಗರ ಸಮುದಾಯಕ್ಕಷ್ಟೇ ಅಲ್ಲದೇ ರೈತರ ಮಕ್ಕಳಿಗೆ ವಿಶೇಷ ಆದ್ಯತೆ ನೀಡಿರುವುದು ಗಮನಾರ್ಹವಾಗಿದೆ. ವಿದ್ಯಾರ್ಥಿಗಳಿಗೆ ಸಂಸ್ಕೃತಿ ಕಲಿಸುವುದು ಮುಖ್ಯವಾಗಬೇಕು. ತಾಯಿ, ತಂದೆಯರಿಗೆ ಮಕ್ಕಳು ವಿಧೇಯರಾಗಿರಬೇಕು. ಗುರುಗಳಿಗೆ ಗೌರವ ನೀಡುವ ಮೂಲಕ ಅವರ ಅಣತಿಯಂತೆ ಸಾಗಬೇಕು ಎಂದು ತಿಳಿಸಿದರು.

ಆರ್‌ಎಪಿಸಿಎಂಎಸ್ ಅಧ್ಯಕ್ಷ ಯು.ಸಿ.ಶೇಖರ್, ಟ್ರಸ್ಟ್ ಅಧ್ಯಕ್ಷ ಕೆ.ಎಸ್.ಬಸವೇಗೌಡ, ಗೌರವಾಧ್ಯಕ್ಷ ಸಿ.ತಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಅನಸೂಯಾ, ಉಪಾಧ್ಯಕ್ಷೆ ಸುಜಾತಾ ಕೃಷ್ಣ, ಟ್ರಸ್ಟಿಗಳಾದ ಬಿ.ಆರ್.ಕೃಷ್ಣೇಗೌಡ, ಎಲ್.ಕೃಷ್ಣ, ಮುಖಂಡರಾದ ಇಂಡುವಾಳು ಚಂದ್ರಶೇಖರ್, ಲಿಂಗೇಗೌಡ, ಕೆ.ಸಿ.ರವೀಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net