ನಗುಮುಖದವರನ್ನು ಸೋಲಿಸಲು ಸಾಧ್ಯವಿಲ್ಲ: ಆದಿಚುಂಚನಗಿರಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಂ.ಎ.ಶೇಖರ್ ಅಭಿಮತ

Award ceremony at KVS Bhavan Mandya
Published on

ಮಂಡ್ಯ: ನಗುಮುಖದಿಂದ ಇರುವ ವ್ಯಕ್ತಿಯನ್ನು ಯಾರೂ ಸೋಲಿಸಲು ಸಾಧ್ಯವಾಗುವುದಿಲ್ಲ ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಂ.ಎ.ಶೇಖರ್ ಅಭಿಪ್ರಾಯಿಸಿದರು.

ನಗರದ ಕೆವಿಎಸ್ ಭವನದಲ್ಲಿ ಜನದನಿ ಸಾಂಸ್ಕೃತಿಕ ಟ್ರಸ್ಟ್, ಕರ್ನಾಟಕ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ 28ನೇ ವರ್ಷದ ದೇವಮ್ಮ ಇಂಡುವಾಳು ಎಚ್.ಹೊನ್ನಯ್ಯ, ಇಂಡುವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ, ಎಚ್.ಶಾರದಮ್ಮ ಮತ್ತು ಕೆಂಪಯ್ಯ ವಿದ್ಯಾರ್ಥಿ ಪುರಸ್ಕಾರ ಮತ್ತು ಎರಡನೇ ವರ್ಷದ ಇಂಡುವಾಳು ಎಚ್.ಹೊನ್ನಪ್ಪ ಕ್ರೀಡಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ವೈದ್ಯರು ಗುಣವಂತರಾಗಿ ನಡೆದುಕೊಳ್ಳುವ ಮೂಲಕ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಅವರ ಮನಸ್ಸು ಗೆಲ್ಲಬೇಕು ಎಂದರು.

ಕಳೆದ 40 ವರ್ಷ ಡಯಾಬೀಟಿಸ್ ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇನೆ. ನಾನು ಒಬ್ಬ ರೋಗಿಯಾದರೆ ವೈದ್ಯರಿಂದ ಏನು ಬಯಸುತ್ತೇನೆ ಎನ್ನುವುದನ್ನು ಸ್ವತಃ ವೈದ್ಯರೇ ಪರೀಕ್ಷಿಸಿಕೊಳ್ಳಬೇಕು. ನಗು ಮುಖದೊಂದಿಗೆ ಮಾತನಾಡುವ ಮೂಲಕ ರೋಗಿಗೆ ಚಿಕಿತ್ಸೆ ನೀಡಬೇಕು. ಪ್ರಸ್ತುತದಲ್ಲಿ ಚಿಕಿತ್ಸೆಗಷ್ಟೇ ಮೀಸಲಾಗಿ ಕೆಲವು ಮಾತ್ರೆಗಳನ್ನು ಕೊಟ್ಟರೆ ಅಲ್ಲಿಗೆ ಕೆಲಸ ಮುಗಿತು ಎನ್ನುವ ವೈದ್ಯರನ್ನು ನೋಡುತ್ತಿದ್ದೇವೆ, ಅದಕ್ಕೂ ಮೀರಿ ರೋಗಿಯ ಜೊತೆ ಸ್ನೇಹಿತನಾಗಿ ವೈದ್ಯರು ನಡೆದುಕೊಳ್ಳಬೇಕು. ಆದರೂ ವೈದ್ಯರು ಕೆಲವು ಸಲ ಶತ್ರುಗಳಾಗುತ್ತಾರೆ, ಅದು ಯಾವಾಗ ಅಂದರೆ ಆಸ್ಪತ್ರೆಯಲ್ಲಿ ಬಿಲ್ ಕೊಟ್ಟಾಗ ಮಾತ್ರ ಎಂದು ತಿಳಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಆದಿಚುಂಚನಗಿರಿ ಶಾಖಾ ಮಠದ ಸತ್‌ಕೀರ್ತಿನಾಥ ಸ್ವಾಮೀಜಿ, ಜನದನಿ ಸಂಸ್ಥೆ ಅಧ್ಯಕ್ಷ ಕೆ.ಜಯರಾಂ, ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಎಂ.ಕೆ.ಹರೀಶ್‌ಕುಮಾರ್, ಚಂದಗಾಲು ಲೋಕೇಶ್, ಡಾ.ಆದರ್ಶ್ ಇದ್ದರು.

ಮೂವರಿಗೆ ಪ್ರಶಸ್ತಿ ಗೌರವ

ಜನದನಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕರ್ನಾಟಕ ಸಂಘದ ಸಹಕಾರದೊಂದಿಗೆ ರಾಜ್ಯಮಟ್ಟದ ಇಂಡುವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿಯನ್ನು ಬೆಂಗಳೂರಿನ ಗ್ಯಾಸ್ಟ್ರೋಎಂಟರಾಲಜಿ ಸೈನ್ಸ್ ಮತ್ತು ಅಂಗಾಗ ಕಸಿ ಸಂಸ್ಥೆಯ ಸ್ಥಾಪಕ ಡಾ.ಎನ್.ಎಸ್.ನಾಗೇಶ್, ದೇವಮ್ಮ ಇಂಡುವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿಯನ್ನು ಮೈಸೂರು ವಿದ್ಯಾರಣ್ಯಪುರಂ ನಿವಾಸಿ ನೀಲಮ್ಮ ಹಾಗೂ ಎಚ್.ಹೊನ್ನಪ್ಪ ಕ್ರೀಡಾ ಪ್ರಶಸ್ತಿಯನ್ನು ಮಂಡ್ಯದ ರಾಜ್ಯಮಟ್ಟದ ಕಬ್ಬಡಿ ಮಾಜಿ ಆಟಗಾರ ಎಚ್.ಕೆ.ಜಗದೀಶ್‌ಚಂದ್ರ ಅವರಿಗೆ ತಲಾ 25 ಸಾವಿರ ರೂ ನಗದಿನ ಜತೆಗೆ ಪ್ರದಾನ ಮಾಡಲಾಯಿತು. ಅಂತೆಯೇ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಬೇವಿನಹಳ್ಳಿ, ಇಂಡುವಾಳು ಹಾಗೂ ಹುಲ್ಕೆರೆ ಕೊಪ್ಪಲು ಗ್ರಾಮದ 4 ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net