

ಮೈಸೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿಜಯನಗರ 1ನೇ ಹಂತದ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ಸಾಹಿತಿ ದಿ.ಪ್ರೊ. ಮಳಲಿ ವಸಂತ ಕುಮಾರ್ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಸಮಾರಂಭ ಉದ್ಘಾಟಿಸಿದ ಸಾಹಿತಿ ಪ್ರೊ.ಸಿ.ಪಿ. ಕೃಷ್ಣಕುಮಾರ್ ಮಾತನಾಡಿ, ಮಳಲಿ ವಸಂತ ಕುಮಾರ್ ನನ್ನ ಶಿಷ್ಯರಾಗಿದ್ದರು. ನಂತರ ಅವರು ನನಗೆ ಸ್ನೇಹಿತ ಹಾಗೂ ಮಾರ್ಗದರ್ಶಕರಾಗಿದ್ದು ವಿಶೇಷ. ಬಹಮುಖದ ವ್ಯಕ್ತಿತ್ವ ಹೊಂದಿದ್ದ ಅವರು ಕಾದಂಬರಿ ಹೊರತು ಪಡಿಸಿ ಸಾಹಿತ್ಯದ ಉಳಿದೆಲ್ಲ ಪ್ರಾಕಾರಗಳಲ್ಲಿ ಕೃಷಿ ಮಾಡಿದ್ದಾರೆ ಎಂದರು.
ಮಳಲಿ ಕನ್ನಡದ ಅಪ್ರತಿಮ ಹೋರಾಟಗಾರರಾಗಿದ್ದರು. ಗೋಕಾಕ್ ಚಳವಳಿಯಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಚಳವಳಿಯಲ್ಲಿ ಅವರು ಜೈಲು ಶಿಕ್ಷೆ ಸಹ ಅನುಭವಿಸಿದ್ದರು. ಗೋಕಾಕ್ ಚಳವಳಿಯಲ್ಲಿ ನಾನು ತೊಡಗಲು ಮಳಲಿ ಕಾರಣ ಎಂದು ಹೇಳಿದರು.
ಹಿರಿಯ ಜಾನಪದ ವಿದ್ವಾಂಸ ಪ್ರೊ.ಜಿ.ಎಸ್. ಭಟ್ಟ ದತ್ತಿ ಪ್ರಶಸ್ತಿ ಸ್ವೀಕರಿಸಬೇಕಾಗಿತ್ತು. ಆದರೆ, ಅವರ ಪತ್ನಿ ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ಸಮಾರಂಭಕ್ಕೆ ಗೈರು ಹಾಜರಾದರು.
ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಹಿರಿಯ ವಿದ್ವಾಂಸ ಪ್ರೊ.ಅನಂತರಾಮು, ಮೈಸೂರು ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್.ಎನ್. ಹೆಗ್ಡೆ, ಸಾಹಿತಿ ಲತಾ ಮೋಹನ್, ದಿ.ಮಳಲಿ ವಸಂತ ಕುಮಾರ್ ಪತ್ನಿ ಶಾಂತ ಇದ್ದರು.