ಕೊಡಗಿನ ಇಬ್ಬರು ಸಾಧಕರಿಗೆ ಗೌರವ

AWARD
Published on
ಮಡಿಕೇರಿ
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಎರಡು ಪ್ರತಿಷ್ಠಿತ ರಾಜ್ಯಮಟ್ಟದ ವಾರ್ಷಿಕ  ಪ್ರಶಸ್ತಿಗಳಿಗೆ ಕೊಡಗು ಜಿಲ್ಲೆಯ ಇಬ್ಬರು ಸಾಧಕರು ಆಯ್ಕೆಯಾಗಿದ್ದಾರೆ.  ಜಿಲ್ಲೆಯ ಹಿರಿಯ ಪತ್ರಕರ್ತ ಜಿ. ರಾಜೇಂದ್ರ ಅವರಿಗೆ  ರಾಜ್ಯಮಟ್ಟದ 'ಡಾ.ಎಚ್ ನರಸಿಂಹಯ್ಯ' ಪ್ರಶಸ್ತಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಾನಪದ ತಜ್ಞರಾದ ರಾಣಿ ಮಾಚಯ್ಯ  'ಚೈತನ್ಯ ಸ್ತ್ರೀ' ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯದಲ್ಲಿ ಜಿಲ್ಲೆಗೊಬ್ಬರಂತೆ ಜೀವಮಾನ ಸಾಧಕರನ್ನು ಗುರುತಿಸಿ 'ಎಚ್ ಎನ್' ಪ್ರಶಸ್ತಿ ನೀಡಲಾಗುತ್ತಿದ್ದು ಕೊಡಗು ಜಿಲ್ಲೆಯಲ್ಲಿ  ಹಿರಿಯ ಪತ್ರಕರ್ತ ಜಿ ರಾಜೇಂದ್ರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪರಿಷತ್ ರಾಜ್ಯ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯಮಟ್ಟದಲ್ಲಿ ವಿಶಿಷ್ಟ ಸಾಧನೆ ಮಾಡಿದ ಮಹಿಳಾ ಸಾಧಕರಿಗೆ ಸಾಧನಾ ಪ್ರಶಸ್ತಿ 'ಚೈತನ್ಯ ಸ್ತ್ರೀ' ಪ್ರಶಸ್ತಿ ಕೊಡಗು ಜಿಲ್ಲೆಯ ರಾಣಿ ಮಾಚಯ್ಯ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯಮಟ್ಟದ ನಾಲ್ಕನೇ ವೈಜ್ಞಾನಿಕ ಸಮ್ಮೇಳನ ಡಿ. 28 ಮತ್ತು 29ರಂದು ಬೆಂಗಳೂರು ಯಲಹಂಕ ತಾಲೂಕು ಬಾಗಲೂರು ವಿ ಜೆ ಇಂಟರ್ನ್ಯಾಷನಲ್ ಶಾಲಾ ಮೈದಾನದಲ್ಲಿ ನಡೆಯಲಿದ್ದು ಡಿ. 29ರಂದು ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ಪರಿಷತ್ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷೆ  ವನಿತಾಚಂದ್ರಮೋಹನ್ ತಿಳಿಸಿದ್ದಾರೆ.
ಎರಡು ದಿನಗಳ ಕಾಲ ನಡೆಯಲಿರುವ ಸಮ್ಮೇಳನದಲ್ಲಿ ಚಿಂತನಗೋಷ್ಠಿಗಳು, ಸಾಂಸ್ಕೃತಿಕ ವೈಭವ,  ವಿಜ್ಞಾನ ವಸ್ತುಪ್ರದರ್ಶನ ಮತ್ತು ಪ್ರಶಸ್ತಿ ಪ್ರದಾನ ಮತ್ತಿತರ ಕಾರ್ಯಕ್ರಮಗಳು  ನಡೆಯಲಿದೆ.
ಖ್ಯಾತ ಚಲನಚಿತ್ರ ನಟಿ ಉಮಾಶ್ರೀ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವನ್ನು  ಮುಖ್ಯಮಂತ್ರಿ ಸಿದ್ದರಾಮಯ್ಯ  ಉದ್ಘಾಟಿಸಲಿದ್ದು ಮಾಜಿ ಮುಖ್ಯಮಂತ್ರಿಗಳು, ಸಚಿವರು, ಸಂಸದರು,  ವಿಜ್ಞಾನಿಗಳು, ಗಣ್ಯ ಚಿಂತಕರು, ಸಾಹಿತಿಗಳು, ಚಲನಚಿತ್ರನಟರು ಸೇರಿದಂತೆ ಪರಿಷತ್ತಿನ 5 ಸಾವಿರಕ್ಕೂ ಮಿಕ್ಕಿ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
----
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net