

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಟರ್ಮಿನಲ್ 2 ಸ್ಕೈಟ್ರಾಕ್ಸ್ 5 ಸ್ಟಾರ್ ಮಾನ್ಯತೆ ಪಡೆದ ಭಾರತದ ಮೊದಲ ಟರ್ಮಿನಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಕೆಐಎ ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್ ತಿಳಿಸಿದ್ದಾರೆ.
ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎಂಬ ಹಿರಿಮೆಯನ್ನು ಎರಡನೇ ಬಾರಿ ಮುಡಿಗೇರಿಸಿಕೊಳ್ಳುವ ಮೂಲಕ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಮುಖ ಜಾಗತಿಕ ವಿಮಾನಯಾನ ಕೇಂದ್ರವಾಗಿ ಹೊರಹೊಮ್ಮಿದೆ ಸ್ಕೈಟ್ರಾಕ್ಸ್ ವಲ್ಡ್ ಏರ್‌ಪೋರ್ಟ್ ಅವಾರ್ಡ್, ವಿಮಾನ ನಿಲ್ದಾಣಗಳ ಶ್ರೇಷ್ಠತೆಯ ಮಾನದಂಡವೆಂದು ಜಾಗತಿಕವಾಗಿ ಹೆಸರುವಾಸಿಯಾಗಿದ್ದು, ಟರ್ಮಿನಲ್ ವಿನ್ಯಾಸ, ಸ್ವಚ್ಛತೆ, ಭದ್ರತೆ, ಆತಿಥ್ಯ ಸೇರಿ 30ಕ್ಕೂ ಹೆಚ್ಚು ವಿಭಾಗಗಳಲ್ಲಿ 800 ಕ್ಕೂ ಹೆಚ್ಚು ಪ್ರಯಾಣಿಕರ ಅಭಿಪ್ರಾಯ, ಲೆಕ್ಕಪರಿಶೋಧನೆಯ ನಂತರ 5 ಸ್ಟಾರ್ ಮಾನ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಈ ಮೈಲಿಗಲ್ಲು ಬೆಂಗಳೂರನ್ನು ಜಾಗತಿಕ ವಿಮಾನಯಾನ ವೇದಿಕೆಯಲ್ಲಿ ಮುಂಚೂಣಿಯಲ್ಲಿರಿಸುತ್ತದೆ. ಭವಿಷ್ಯದಲ್ಲೂ ಇದೇ ರೀತಿ ಪ್ರಯಾಣಿಕರಿಗೆ ಉತ್ತಮ ಅನುಭವ ನೀಡುವ ನಮ್ಮ ಪ್ರಯತ್ನ ಮುಂದುವರೆಯಲಿದೆ ಎಂದು ತಿಳಿಸಿದರು.
ಗುಣಮಟ್ಟಕ್ಕೆ ಸಂದ ಮನ್ನಣೆ: ಈ ಪ್ರತಿಷ್ಠಿತ ಮಾನ್ಯತೆಯನ್ನು ಗಳಿಸುವ ಮೂಲಕ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಜಾಗತಿಕವಾಗಿ ಮೆಚ್ಚುಗೆ ಪಡೆದ 5-ಸ್ಟಾರ್ ಮಾನ್ಯತೆ ಪಡೆದ ವಿಮಾನ ನಿಲ್ದಾಣಗಳ ಟರ್ಮಿನಲ್‌ಗಳ ಸಾಲಿಗೆ ಸೇರ್ಪಡೆಗೊಂಡಂತಾಗಿದೆ ಈ ಅತ್ಯುನ್ನತ ಮಾನ್ಯತೆ ಸಾಧಿಸಿದ ಭಾರತದ ಮೊದಲ ವಿಮಾನ ನಿಲ್ದಾಣವಾಗಿರುವುದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅತ್ಯುನ್ನತ ಗುಣಮಟ್ಟಕ್ಕೆ ಸಂದ ಮನ್ನಣೆಯಾಗಿದೆ ಎಂದು ಸ್ಕೈಟ್ರಾಕ್ಸ್‌ನ ಸಿಇಒ ಎಡ್ವರ್ಡ್ ಪ್ಲಾಸ್ಟೆಡ್ ಪ್ರಶಂಸಿದ್ದಾರೆ.