

ಧಾರವಾಡ: ಯೋಗೀಶಗೌಡ ಕೊಲೆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಇನ್ಸ್ಪೆಕ್ಟರ್ ಚನ್ನಕೇಶವ ಟಿಂಗರಿಕರ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ. 30ಕ್ಕೆ ಮುಂದೂಡಿದೆ.
ನಿರೀಕ್ಷಣಾ ಜಾಮೀನು ಅರ್ಜಿಗೆ ಸಿಬಿಐ ತಕರಾರು ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ನ. 30ಕ್ಕೆ ವಿಚಾರಣೆ ಮುಂದೂಡಿ ಹೈಕೋರ್ಟ್ ಸೋಮವಾರ ಆದೇಶಿಸಿತು.
ಯೋಗೀಶಗೌಡ ಕೊಲೆ ನಡೆದ ವೇಳೆ ಟಿಂಗರಿಕರ ಉಪನಗರ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದರು. ತನಿಖೆ ಮಾಡಿ ಐವರು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ನಂತರ ಸಿಬಿಐಗೆ ತನಿಖೆಯನ್ನು ವಹಿಸಿದ ನಂತರ ಪ್ರಕರಣ ಹೊಸ ತಿರುವು ಪಡೆದಿತ್ತು. ಪೊಲೀಸರು ಬಂಧಿಸಿದ್ದ ಆರೋಪಿಗಳು ನೈಜ ಕೊಲೆಗಾರರೇ ಅಲ್ಲ ಎಂದು ಸಿಬಿಐ ತಂಡ ಪತ್ತೆ ಹಚ್ಚಿತ್ತು. ಬೆಂಗಳೂರಿನ 6 ಸುಪಾರಿ ಹಂತಕರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು.