

ಬೆಳಗಾವಿ: ಮಹಾನಗರ ಪಾಲಿಕೆಯ ವಿವಿಧ ವಿಭಾಗಗಳಲ್ಲಿ ಮಧ್ಯವರ್ತಿಗಳ ಹಾವಳಿಯಿಂದಾಗಿ ಸಾಮಾನ್ಯ ಜನರ ಯಾವುದೇ ಕೆಲಸಗಳು ಆಗುತ್ತಿಲ್ಲ. ಅಲ್ಲದೇ, ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ಕೂಡಲೇ ಇದನ್ನು ನಿಲ್ಲಿಸುವಂತೆ ಪಾಲಿಕೆ ಸದಸ್ಯರು ಆಗ್ರಹಿಸಿದರು.
ನಗರದ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಂದಾಯ ವಿಭಾಗದ ಸ್ಥಾಯಿ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಕಾರಿಗಳ ಕಾರ್ಯವೈಖರಿ, ಮಧ್ಯವರ್ತಿಗಳ ಕಿರಿಕಿರಿ, ಆಸ್ತಿ ತೆರಿಗೆ ಸಂಗ್ರಹ, ಪಿಆರ್‌ಡಿ ಸಂಖ್ಯೆ ನೀಡುವಲ್ಲಿ ಅಕ್ರಮಗಳ ಕುರಿತು ಸದಸ್ಯರು ಅಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪಾಲಿಕೆಯ ಕಂದಾಯ, ನಗರ ಯೋಜನೆ, ಆರೋಗ್ಯ ಸೇರಿ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕಾರಿಗಳು ಸದಸ್ಯರಿಗಿಂತ ಮಧ್ಯವರ್ತಿಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಪಾಲಿಕೆ ಆಡಳಿತದಲ್ಲಿ ಪದೇ ಪದೆ ಮಧ್ಯಪ್ರವೇಶಿಸುತ್ತಿರುವ ಕೆಲ ಮಾಜಿ ಸದಸ್ಯರಿಗೆ ಅಕಾರಿಗಳು ಕಡಿವಾಣ ಹಾಕಿ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಮನೋಭಾವ ಮೈಗೂಡಿಸಿಕೊಳ್ಳಬೇಕು. ತಮ್ಮ ಕಾರ್ಯವೈಖರಿ ಬದಲಾಯಿಸಿಕೊಳ್ಳದಿದ್ದರೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮೇಯರ್ ಮಂಗೇಶ ಪವಾರ್ ಮಾತನಾಡಿ, ವಾರ್ಡ್‌ಗಳಲ್ಲಿನ ಜನರ ಸಮಸ್ಯೆ ಪರಿಹರಿಸಬೇಕು. ತೆರಿಗೆ ವಸೂಲಿ ಪ್ರಮಾಣ ಹೆಚ್ಚಿಸಬೇಕು. ಆಸ್ತಿಗಳ ಪರಿಷ್ಕರಣೆ ನಡೆಸಿ ತೆರಿಗೆ ವಿಸಬೇಕು. ಎ ಮತ್ತು ಬಿ ಖಾತಾ ವಿತರಣೆ ನಿರ್ಲಕ್ಷ ಮಾಡುವುದು ಸರಿಯಲ್ಲ. ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳು ವಿಲೇವಾರಿ ಆಗುತ್ತಿಲ್ಲ. ಕೂಡಲೇ ಆಡಳಿತದಲ್ಲಿ ಪಾರದರ್ಶಕ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಪಾಲಿಕೆ ಆಯುಕ್ತೆ ಶುಭ ಬಿ. ಮಾತನಾಡಿ, ಇನ್ಮುಂದೆ ಪಾಲಿಕೆಯಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲಾಗುವುದು. ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಅಕಾರಿ, ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗುವುದು. ಎ ಮತ್ತು ಬಿ ಖಾತಾ ವಿತರಣೆಯಲ್ಲಿ ವಿಳಂಬ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಉಪಮೇಯರ್ ವಾಣಿ ಜೋಶಿ, ಪ್ರತಿಪಕ್ಷದ ನಾಯಕ ಮುಜಮ್ಮಿಲ ಡೋಣಿ, ರಿಯಾಜ್ ಕಿಲ್ಲೇದಾರ್, ಗಿರೀಶ ದೊಂಗಡಿ ಇತರರಿದ್ದರು.
ಪಾಲಿಕೆಯಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಅಕಾರಿಗಳಿಗೆ ಸೂಚಿಸಲಾಗಿದೆ. ತೆರಿಗೆ ವಿನಾಯಿತಿ ಜೂನ್‌ವರೆಗೆ ವಿಸ್ತರಣೆ ಮಾಡಿರುವ ಹಿನ್ನೆಲೆ ಕರ ಸಂಗ್ರಹ ಹೆಚ್ಚಿಸುವಂತೆ ಹಾಗೂ ಎ ಮತ್ತು ಬಿ ಖಾತಾ ವಿತರಣೆಯಲ್ಲಿ ವಿಳಂಬ ಮಾಡದಂತೆ ಸೂಚಿಸಲಾಗಿದೆ. | ಹಣಮಂತ ಕೊಂಗಾಲಿ ಪಾಲಿಕೆ ಆಡಳಿತ ಪಕ್ಷದ ನಾಯಕ