ಗ್ರಾಮ ಆಡಳಿತಾಧಿಕಾರಿಗಳ ಮೇಲಿನ ಒತ್ತಡ ತಪ್ಪಿಸಿ

2
Published on

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ | ಕಪ್ಪು ಬಟ್ಟೆ ಧರಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಿದ ಸಿಬ್ಬಂದಿ

ವಿಜಯವಾಣಿ ಸುದ್ದಿಜಾಲ ತುಮಕೂರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳು ಕಚೇರಿಗೆ ಗೈರು ಹಾಜರಾಗಿ ಜಿಲ್ಲೆಯ ಎಲ್ಲ ತಾಲೂಕು ಕಚೇರಿ ಮತ್ತು ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆಗೆ ಮುಂದಾಗಿದ್ದು, ಜಿಲ್ಲೆಯಲ್ಲಿ ಕಂದಾಯ ಇಲಾಖಾ ಕಾರ್ಯಚಟುವಟಿಕೆಗಳಿಗೆ ಸ್ಥಗಿತಗೊಳಿಸಲಾಗಿದೆ. ಜಿಲ್ಲೆಯಲ್ಲಿ 680 ಗ್ರಾಮ ಆಡಳಿತಾಧಿಕಾರಿಗಳು ಕಾರ್ಯಚಟುವಟಿಕೆ ಬಿಟ್ಟು ಧರಣಿಗೆ ಮುಂದಾಗಿದ್ದು, ಗುರುವಾರ ಆಯಾ ತಾಲೂಕು ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದ್ದು, ಶುಕ್ರವಾರದಿಂದ ಎಲ್ಲರೂ ಒಟ್ಟಾಗಿ ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಡೆಸಲಿದ್ದಾರೆ. ಗುರುವಾರ ಕಂದಾಯ ಇಲಾಖೆಯ ಎಲ್ಲ ಗ್ರಾಮ ಆಡಳಿತಾಧಿಕಾರಿಗಳು ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಧರಣಿಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರಂತೆ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿಗೂ ಬಿಸಿ ತಟ್ಟಿತು. ಜಿಲ್ಲಾಧಿಕಾರಿ ಶುಭಕಲ್ಯಾಣ್​ ಆಪ್ತಶಾಖೆಯಲ್ಲಿರುವ ಎಲ್ಲ ಸಿಬ್ಬಂದಿ ಧರಣಿಯಲ್ಲಿ ಭಾಗವಹಿಸಿದ್ದರಿಂದ ಖುದ್ದು ಡಿಸಿಗೆ ಕೆಲಸ ಕಾರ್ಯಗಳನ್ನು ಮಾಡಲಾಗಲಿಲ್ಲ.
ಗ್ರಾಮ ಆಡಳಿತಾಧಿಕಾರಿ ಸಂದ ಪದಾಧಿಕಾರಿಗಳನ್ನು ಸಂಪರ್ಕಿಸಿ ಆಪ್ತ ಸಹಾಯಕರ ಪೈಕಿ ಒಬ್ಬರನ್ನಾದರೂ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡು ಒಬ್ಬ ಆಪ್ತ ಸಹಾಯಕ ಕರ್ತವ್ಯ ನಿರ್ವಹಿಸುವಂತೆ ಮಾಡಿಕೊಂಡರು. ಇನ್ನು ಜಿಲ್ಲೆಯ ಎಲ್ಲ ವೃತ್ತದಲ್ಲಿಯೂ ಕಂದಾಯ ಇಲಾಖೆಗೆ ಸಂಬಂಧಪಟ್ಟ ಕಾರ್ಯಚಟುವಟಿಕೆಗಳಿಗೂ ಗ್ರಹಣ ಬಡಿದಂತಾಗಿದೆ.
ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಎಸ್​.ದೇವರಾಜು ಮಾತನಾಡಿ, ಕಂದಾಯ ಇಲಾಖೆ ಪ್ರಗತಿಯ ನೆಪದಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಮೇಲಿನ ಒತ್ತಡ ತಪ್ಪಿಸಿ, ಇಲಾಖೆ ಸೃಜಿಸಿರುವ ಮೊಬೈಲ್​ ಆ್ಯಪ್​ಗಳ ಬಳಕೆಗೆ ಸಂಬಂಧಿಸಿದಂತೆ ಸೂಕ್ತ ತರಬೇತಿ ಮತ್ತು ಅಗತ್ಯ ಪರಿಕರ ನೀಡಬೇಕು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮೌನ ಪ್ರತಿಭಟನಾ ಧರಣಿ ಆರಂಭಿಸಲಾಗಿದೆ ಎಂದರು. ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿಯೂ ಗ್ರಾಮ ಆಡಳಿತ ಅಧಿಕಾರಿಗಳು ಗುರುವಾರ ಕಪು$್ಪ ಬಟ್ಟೆ ಧರಿಸಿ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡಿದ್ದೇವೆ. ಶುಕ್ರವಾರ ತುಮಕೂರಿನ ಗಾಜಿನಮನೆಯಲ್ಲಿ ಸಮಾವೇಶಗೊಂಡು ಮೌನ ಪ್ರತಿಭಟನೆ ಮುಂದುವರೆಸಲಿದ್ದೇವೆ. ಬೇಡಿಕೆ ಈಡೇರಿಸುವವರೆಗೂ ಧರಣಿ ರಾಜ್ಯಾದ್ಯಂತ ನಡೆಯಲಿದೆ ಎಂದರು. ಪ್ರಧಾನ ಕಾರ್ಯದರ್ಶಿ ಭಕ್ತವತ್ಸಲ, ಖಜಾಂಚಿ ಮೋಹನ್​,ಉಪಾಧ್ಯಕ್ಷ ಯಮನೂರು, ಜಿಲ್ಲಾ ಸಹಕಾರ್ಯದರ್ಶಿ ರಾಘವೇಂದ್ರಸ್ವಾಮಿ, ಮಹಿಳಾ ಘಟಕದ ಸಂಘಟನಾ ಕಾರ್ಯದರ್ಶಿ ಎಚ್​.ಸಿ.ಹೇಮಾ ಮತ್ತಿತರರು ಇದ್ದರು.

ಮಹಿಳಾ ಸಿಬ್ಬಂದಿ ಸಮಸ್ಯೆ ಹೇಳತೀರದು
ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿ ಹೇಮ ಮಾತನಾಡಿ, ಸರ್ಕಾರ ಕೆಲಸಕ್ಕೆ ಅಗತ್ಯವಿರುವ ಮೂಲ ಸೌಕರ್ಯ ನೀಡದೆ ಪ್ರಗತಿ ಕೇಳುತ್ತಿದೆ. ಕೊರತೆಗಳ ನಡುವೆಯೇ ಶೇ.90ರಷ್ಟು ಸಾಧನೆ ಮಾಡಲಾಗಿದೆ. ಕಚೇರಿಗಳಿಲ್ಲದೆ ಮಹಿಳಾ ಗ್ರಾಮ ಆಡಳಿತ ಅಧಿಕಾರಿಗಳ ಸ್ಥಿತಿ ಹೇಳ ತೀರದಾಗಿದೆ. ಅಧಾರ್​ ಸೀಡಿಂಗ್​, ಬೆಳೆ ಸಮೀಕ್ಷೆಯಂತಹ ಸಂದರ್ಭದಲ್ಲಿ ಯಾರದೋ ಜಗಲಿ, ಅರಳೀಮರದ ಕಟ್ಟೆ ಮೇಲೆ ಕುಳಿತು ಕೆಲಸ ಮಾಡಬೇಕಾಗುತ್ತಿದೆ ಎಂದರು. ಸಂಜೆ 7ರ ನಂತರವೂ ವರ್ಚುವೆಲ್​ ಮೀಟಿಂಗ್​ನಿಂದಾಗಿ ಮನೆಯ ಕೌಟುಂಬಿಕ ವಾತಾವರಣ ಹದಗೆಡುತ್ತಿದೆ. ಮಕ್ಕಳು, ವಯೋವೃದ್ಧ ಪಾಲಕರ ಕಡೆ ಗಮನಹರಿಸಲಾಗುತ್ತಿಲ್ಲ. ಅಂತರ ಜಿಲ್ಲಾ ಪತಿ, ಪತ್ನಿ ಪ್ರಕರಣದ ವರ್ಗಾವಣೆ ಇಲ್ಲದೆ, ಸಾಕಷ್ಟು ತೊಂದರೆಯಾಗಿದೆ. ಗಂಡ ಒಂದು ಜಿಲ್ಲೆ, ಹೆಂಡತಿ ಒಂದು ಜಿಲ್ಲೆಯಲ್ಲಿ ಕೆಲಸ ಮಾಡುತ್ತಾ ಪರಸ್ವರ ಮುಖ ನೋಡುವುದು ಕಷ್ಟವಾಗಿ, ಸಾಂಸಾರಿಕ ಜೀವನವೇ ಹದಗೆಡುತ್ತಿದೆ. ಈ ಎಲ್ಲ ಬೇಡಿಕೆಗಳ ಈಡೆರಿಕೆಗೆ ಒತ್ತಾಯಿಸಿ ಪ್ರತಿಭಟನೆ ಆರಂಭಿಸಲಾಗಿದೆ ಎಂದರು.

29ರಿಂದ ಹೋರಾಟ ತೀವ್ರ
ಕಂದಾಯ ಇಲಾಖೆಯಿಂದ ಬೆಳೆ ಸಮೀಕ್ಷೆ, ಬಗರ್​ ಹುಕ್ಕಂ ಭೂಮಿ ಗುರುತು ಮಾಡುವುದು ಸೇರಿದಂತೆ ಸುಮಾರು 17 ಮೊಬೈಲ್​ ಆ್ಯಪ್​ಗಳನ್ನು ಸೃಜಿಸಿ, ಪ್ರಗತಿಯ ಹೆಸರಿನಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಮೇಲೆ ಒತ್ತಡ ಹಾಕಲಾಗುತ್ತಿದೆ. ಆದರೆ ಮೂಲ ಸೌಕರ್ಯಗಳನ್ನು ನೀಡಿಲ್ಲ. ಕಚೇರಿಯಾಗಲಿ, ಪೀಠೋಪಕರಣವಾಗಲಿ ಇಲ್ಲ. ಬೆಳೆ ಸಮೀಕ್ಷಯಂತಹ ಸಂದರ್ಭದಲ್ಲಿ ಕರಡಿ, ಚಿರತೆ ದಾಳಿಗೆ ಒಳಗಾದ ಪ್ರಸಂಗಗಳಿವೆ. ಯಾವುದೇ ರಕ್ಷಣೆ ಇಲ್ಲ. ಹೆಣ್ಣು ಮಕ್ಕಳ ಸ್ಥಿತಿ ಹೇಳ ತೀರದಾಗಿದೆ. ಕಾಲ ಕಾಲಕ್ಕೆ ಪದೋನ್ನತ್ತಿ ದೊರೆಯುತ್ತಿಲ್ಲ. 20 ವರ್ಷಕ್ಕೂ ಹೆಚ್ಚು ಕಾಲ ಒಂದೇ ಹುದ್ದೆಯಲ್ಲಿ ಕೆಲಸ ಮಾಡಬೇಕಾಗಿದೆ. ಅಂತರ ಜಿಲ್ಲಾ ವರ್ಗಾವಣೆ ನಿಯಮ ಸಮರ್ಪಕವಾಗಿಲ್ಲ. ಈ ಎಲ್ಲ ಅಂಶಗಳನ್ನು ಮುಂದಿಟ್ಟು ಇಂದು ಮತ್ತು ನಾಳೆ ಮೌನ ಪ್ರತಿಭಟನೆ ಹಮ್ಮಿಕೊಂಡಿದ್ದು, ಸರ್ಕಾರ ಗಮನಹರಿಸದಿದ್ದರೆ ಸೆಪ್ಟಂಬರ್​ 29ರಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಸ್​.ದೇವರಾಜು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net