

ರಾಣೆಬೆನ್ನೂರ: ಆರ್ಟಿಒ ಕಚೇರಿಗೆ ಸ್ವಂತ ಕಟ್ಟಡ ಮಂಜೂರು ಮಾಡಬೇಕು ಹಾಗೂ ಏಜೆಂಟರ್ ಹಾವಳಿ ತಡೆಯಬೇಕು ಎಂದು ಆಗ್ರಹಿಸಿ ಇಲ್ಲಿಯ ರೈತ ಸಂಘದ ಕಾರ್ಯಕರ್ತರು ಗುರುವಾರ ತಹಸೀಲ್ದಾರ್ ಶಂಕರ ಜಿ.ಎಸ್. ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡ ಕೃಷ್ಣಮೂರ್ತಿ ಲಮಾಣಿ ಮಾತನಾಡಿ, ಪಿ.ಬಿ. ರಸ್ತೆ ಬಳಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಿದ್ದು, ಅದು ಬಾಡಿಗೆ ಕಟ್ಟಡದಲ್ಲಿದೆ. ಕಚೇರಿ ಆರಂಭವಾಗಿ ಮೂರು ವರ್ಷ ಕಳೆದರೂ ಸ್ವಂತ ಕಟ್ಟಡ ನೀಡಿಲ್ಲ. ಅಲ್ಲದೆ, ಬಾಡಿಗೆ ಕಟ್ಟಡ ಚಿಕ್ಕದಾಗಿರುವ ಕಾರಣ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಏಜೆಂಟರು ಹಾಗೂ ಸಿಬ್ಬಂದಿ ಮಧ್ಯೆ ಹೊಂದಾಣಿಕೆ ಮಾಡಿಕೊಂಡಿರುವ ಕಾರಣ ಎಲ್ಲ ಕೆಲಸ ಕಾರ್ಯಗಳಿಗೂ ಹಣ ಕೊಡಲೇಬೇಕಾದ ಅನಿವಾರ್ಯತೆಯಿದೆ. ಇಲ್ಲದಿದ್ದರೆ ಯಾವ ಕೆಲಸ ಕಾರ್ಯಗಳನ್ನೂ ಮಾಡಿಕೊಡುತ್ತಿಲ್ಲ. ಆದ್ದರಿಂದ ಏಜೆಂಟರ ಹಾವಳಿ ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಕುಮಾರ ನಾಯ್ಕ, ವಿಜಯ ಚವ್ಹಾಣ, ಹಾಲೇಶ ಲಮಾಣಿ, ನಾಗರಾಜ ಚಳಗೇರಿ, ಶಿವಾನಂದ ಹೊಸಮನಿ, ಮಂಜುನಾಥ ರಾಹುತನಕಟ್ಟಿ, ಹನುಮಂತ ಎಚ್., ಬೀರಪ್ಪ ಲಮಾಣಿ ಮತ್ತಿತರರಿದ್ದರು.