

ಹಾನಗಲ್ಲ: ಮದ್ಯದ ವ್ಯಾಪಾರ-ವಹಿವಾಟು ನಡೆಸಲು ಅಬಕಾರಿ ನಿರೀಕ್ಷಕರು ಕಿರುಕುಳ ನೀಡುತ್ತಿದ್ದಾರೆ. ಪಕ್ಕದ ಜಿಲ್ಲೆಗಳಿಂದ ಅಕ್ರಮವಾಗಿ ಮದ್ಯ ಸರಬರಾಜಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ತಾಲೂಕು ಅಬಕಾರಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಮದ್ಯ ಮಾರಾಟಗಾರರು ಹಾವೇರಿ ಅಬಕಾರಿ ಉಪ ಆಯುಕ್ತೆ ಶೈಲಜಾ ತಲ್ಲೂರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದ್ದಾರೆ.
ತಾಲೂಕು ಅಬಕಾರಿ ನಿರೀಕ್ಷಕ ಆರ್.ಟಿ. ಸವಿತಾ ಅವರು ತಾಲೂಕಿನ ಮದ್ಯ ಮಾರಾಟದ ಸನ್ನದುದಾರರಿಗೆ ಒಂದಿಲ್ಲೊಂದು ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ. ಪಕ್ಕದ ಜಿಲ್ಲೆಗಳಾದ ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಅಕ್ರಮವಾಗಿ ತಾಲೂಕಿಗೆ ಬರುತ್ತಿದೆ. ಈ ಬಗ್ಗೆಯೂ ಸವಿತಾ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ತಾಲೂಕಿನಲ್ಲಿ ಎಲ್ಲ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಅಬಕಾರಿ ಅಧಿಕಾರಿಗಳಿಗೆ ಇದರ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಇಲಾಖೆ ಕ್ರಮ ಕೈಗೊಳ್ಳದಿದ್ದರೆ, ತಾಲೂಕಿನ ಸನ್ನದುದಾರರು ತಮ್ಮ ಎಲ್ಲ ಮದ್ಯದಂಗಡಿಗಳನ್ನು ಬಂದ್ ಮಾಡುವ ಅನಿವಾರ್ಯತೆ ಎದುರಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮದ್ಯ ಮಾರಾಟಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸಣ್ಣ ಬೆಳವಾಡಿ, ಆರ್. ನಾಗರಾಜ, ತಾಲೂಕು ಘಟಕದ ಎಸ್. ಅಮರೇಂದ್ರ, ರಾಮು ಯಳ್ಳೂರ, ಎಸ್.ಎಸ್. ಶೀಲವಂತ, ಸಂಜೀವ ಕಲಾಲ, ಹರೀಶ ಈಳಿಗೇರ, ಸಿದ್ದಪ್ಪ ಕಾರಡಗಿ, ಮಾರುತಿ ಈಳಿಗೇರ, ಶ್ರೀಧರ ಕಲ್ಯಾಣಿ, ರಾಜು ಕಲಾಲ, ಮಂಜು ಈಳಿಗೇರ ಇದ್ದರು.