

ಬೀಳಗಿ: ಅನ್ಯರಾಜ್ಯದ ವ್ಯಾಪಾರಿಗಳನ್ನು ತಾಲೂಕಿನಿಂದ ಹೊರಹಾಕಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ವಿನೋದ ಹತ್ತಳ್ಳಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣ ಸೇರಿ ತಾಲೂಕಿನಲ್ಲಿ ಬೇರೆ ರಾಜ್ಯಗಳಿಂದ ಆಗಮಿಸಿದ ವ್ಯಾಪಾರಸ್ಥರು ಸ್ಥಳೀಯ ಉದ್ಯೋಗ ಕಸಿದುಕೊಳ್ಳುತ್ತಿದ್ದಾರೆ. ಕನ್ನಡದ ಸಂಸ್ಕೃತಿಗೂ ಧಕ್ಕೆ ತರುತ್ತಿದ್ದಾರೆ. ಇಲ್ಲಿನ ವ್ಯಾಪಾರಸ್ಥರನ್ನೇ ಊರು ಬಿಟ್ಟು ಗುಳೇ ಹೋಗುವಂತೆ ಹುನ್ನಾರ ನಡೆಸುತ್ತಿದ್ದಾರೆ. ಆದ್ದರಿಂದ ಇಂಥ ವಂಚರನ್ನು ತಾಲೂಕಿನಿಂದ ಹೊರಹಾಕುವ ಉದ್ದೇಶದಿಂದ ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಈಗಾಗಲೇ ತಾಲೂಕಿನ ಹಲವಾರು ಗ್ರಾಮಗಳ ಆಸ್ತಿ- ಪಾಸ್ತಿ ಜತೆಗೆ ವಂಶಪಾರಂಪರಿಕವಾಗಿ ಬಂದ ಕಸುಬುಗಳನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಅಂತದ್ದರಲ್ಲಿ ಬೇರೆ ರಾಜ್ಯದ ವ್ಯಾಪಾರಸ್ಥರು ಎಲ್ಲ ರೀತಿಯ ವ್ಯಾಪಾರಗಳಲ್ಲಿ ಮಾರುಕಟ್ಟೆ ದರದಲ್ಲಿ ವ್ಯತ್ಯಾಸ ಮಾಡಿಕೊಂಡಂತೆ ನಾಟಕವಾಡಿ ನಿತ್ಯ ಜನತೆ ಮೋಸ ಮಾಡುತ್ತಿದ್ದಾರೆ ಎಂದು ದೂರಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಬಸವರಾಜ ಧರ್ಮತಿ ಮಾತನಾಡಿ, ಅನ್ಯರಾಜ್ಯದ ವ್ಯಾಪಾರಸ್ಥರು ಕರ್ನಾಟಕದಲ್ಲಿದ್ದರೂ ಉದ್ಯೋಗ ಮಾತ್ರ ಬೇಕು, ಅವರು ಕನ್ನಡ ಮಾತನಾಡಲ್ಲ. ಲಕ್ಷಾಂತರ ರೂ. ಅಡ್ವಾನ್ಸ್ ಹಾಗೂ ಬಾಡಿಗೆ ನೀಡುವ ಮೂಲಕ ಸ್ಥಳೀಯ ವ್ಯಾಪಾರಸ್ಥರಿಗೆ ಉದ್ಯೋಗ ಇಲ್ಲದಂತೆ ಮಾಡುತ್ತಿದ್ದಾರೆ. ಮುಂದಿನ ದಿನಮಾನಗಳಲ್ಲಿ ಬೀಳಗಿ ಪಟ್ಟಣದಲ್ಲಿ ಯುವಕರಿಗೆ, ಮಕ್ಕಳಿಗೆ ವ್ಯಾಪಾರ ಮಾಡುವ ಅವಕಾಶ ಸಿಗದಂತಾಗಿದೆ. ಬಡ್ಡಿ ಆಮಿಷವೊಡ್ಡಿ ಸ್ಥಳೀಯ ಮಹಿಳೆಯರಿಗೆ ಹಾಗೂ ಜನತೆಯಿಂದ ಲಕ್ಷಾಂತರ ಹಣ ಪಡೆದು ಇಲ್ಲಿಂದ ಪರಾರಿಯಾದ ಘಟನೆಗಳೂ ನಡೆದಿವೆ ಎಂದು ಆರೋಪಿಸಿದರು.
ಮಲ್ಲನಗೌಡ ನಿಲ್ಲಪ್ಪನ್ನವರ, ನಾಗರಾಜ ಕಂಟಸಾಲಿ, ಡಾ. ಸುಭಾಸ ನರಳಿ, ಆನಂದ ಮುಳವಾಡ, ಸಿದ್ದು ಗಡ್ಡದ, ಸಿದ್ದು ಮಾದರ, ಕಾಶಿಂ ಗೋಠೆ, ಶಂಕರ ಮೂಲಿನಮನಿ, ಆನಂದ ಮಂಟೂರ, ರಾಜೇಶ್ವರ ಹಿರೇಮಠ, ಬಸವರಾಜ ಉಮಚಗಿಮಠ, ನಿಂಗಪ್ಪ ಪೂಜಾರಿ, ವೀರಣ್ಣ ಕೆರೂರ, ಯುಶೂಬ ಬಳೂತಿ, ಮಲ್ಲು ಲಮಾಣಿ, ವಿಶ್ವನಾಥ ಕರಣಿ, ಮನೋಜ ಹಾದಿಮನಿ, ವರ್ತಕರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.
ಪ್ರತಿಭಟನೆಯಿಮದಾಗಿ ಎಲ್ಲ ಅಂಗಡಿ ಮುಂಗಟ್ಟುಗಳು ಮಾತ್ರ ಬಂದಾಗಿದ್ದವು. ಆದರೆ, ಎಂದಿನಂತೆ ಜನ ಸಂಚಾರ ಸುಗಮವಾಗಿತ್ತು. ಪಿಎಸ್‌ಐ ಬಸವರಾಜ ಹಳಬನ್ನವರ ನೇತೃತ್ವದಲ್ಲಿ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.