

ಶಿರಸಿ: ಹೆಣ್ಣು ಮಕ್ಕಳು ಹುಟ್ಟಿದರೆ ಕುಟುಂಬ ನೋವು ಪಡುವ ಸ್ಥಿತಿಯಿಂದ ಹೊರಬರಬೇಕು ಎಂಬುದು ರಾಜ್ಯ ಸರ್ಕಾರದ ಆಶಯವಾಗಿದೆ. ಹೀಗಾಗಿ ಪ್ರಮುಖ ಯೋಜನೆಗಳನ್ನು ಮಹಿಳಾ ಕೇಂದ್ರೀಕರಿಸಿ ರೂಪಿಸಲಾಗಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ನಗರದ ಅಂಬೇಡ್ಕರ್ ಸಭಾಭವನದಲ್ಲಿ ಶುಕ್ರವಾರ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಸುಕನ್ಯಾ ಸಮೃದ್ಧಿ ಯೋಜನೆಯ ಪಾಸ್ ಬುಕ್ ವಿತರಣೆ ಹಾಗೂ ಬೇಟಿ ಬಚಾವೋ ಬೇಟಿ ಪಢಾವೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಒಳ್ಳೆಯ ಶಿಕ್ಷಣ, ಸಂಸ್ಕೃತಿ ನೀಡುವ ಮೂಲಕ ಹೆಣ್ಣು ಮಕ್ಕಳ ಮೇಲಾಗುತ್ತಿರುವ ಶೋಷಣೆ ತಪ್ಪಿಸಬೇಕು ಎಂಬುದು ನಮ್ಮ ಉದ್ದೇಶ. ಗ್ರಾಮೀಣ ಪ್ರದೇಶದಲ್ಲಿ ಕೂಲಿ ಮಾಡುವವರ ಹೆಣ್ಣು ಮಕ್ಕಳೂ ಸಹ ಸಮಾಜದ ಪ್ರಮುಖ ಹುದ್ದೆ ಏರುವಂತಾಗಬೇಕು. ಭ್ರೂಣ ಲಿಂಗ ಪತ್ತೆ ನಿಷೇಧ ಕೇವಲ ಕಾನೂನು ಮಾತ್ರವಾಗದೇ ಎಲ್ಲರೂ ಪಾಲಿಸುವಂತಾಗಬೇಕು ಎಂದರು.
ಉಪವಿಭಾಗಾಧಿಕಾರಿ ಅಪರ್ಣಾ ರಮೇಶ ಮಾತನಾಡಿ, ಒಬ್ಬ ಪುರುಷನಿಗೆ ಶಿಕ್ಷಣ ಸಿಕ್ಕರೆ ಆತ ಮಾತ್ರ ಅಭಿವೃದ್ಧಿ ಹೊಂದುತ್ತಾನೆ. ಮಹಿಳೆಗೆ ಶಿಕ್ಷಣ ಸಿಕ್ಕರೆ ಇಡೀ ಕುಟುಂಬವೇ ಸುಶಿಕ್ಷಿತವಾಗುತ್ತದೆ. ಮಗ- ಮಗಳ ನಡುವೆ ಬೇದ ಭಾವ ಮಾಡಬಾರದು ಎಂದರು. ತಹಸೀಲ್ದಾರ್ ಶ್ರೀಧರ ಮುಂದಲಮನಿ, ನಗರಸಭೆ ಸದಸ್ಯ ಖಾದರ ಆನವಟ್ಟಿ, ಸಿಡಿಪಿಒ ವೀಣಾ ಶಿರಸಿಕರ್ ಇತರರಿದ್ದರು.
ಇದಕ್ಕೂ ಮುನ್ನ ನಡೆದ ಆಶಾ ಕಾರ್ಯಕರ್ತೆಯರ ಸಮಾವೇಶದಲ್ಲಿ ಮಾತನಾಡಿದ ಶಾಸಕ ಭೀಮಣ್ಣ ನಾಯ್ಕ, ಕರೊನಾ ಕಾಲಘಟ್ಟದಲ್ಲಿ ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ್ದಾರೆ. ಮನೆಯಲ್ಲಿ ಆರ್ಥಿಕ ಸಮಸ್ಯೆ ಇದ್ದರೂ ಉಳಿದ ಮಕ್ಕಳು ಆರೋಗ್ಯ ಸಮಸ್ಯೆ ಎದುರಿಸಬಾರದು ಎಂದು ಶ್ರಮಿಸುತ್ತಾರೆ. ಆದರೆ, ಅವರ ಶ್ರಮಕ್ಕೆ ತಕ್ಕ ಗೌರವಧನ ಲಭ್ಯವಾಗುತ್ತಿಲ್ಲ. ಈ ಕುರಿತಂತೆ ಮುಖ್ಯಮಂತ್ರಿಗಳ ಜತೆ ರ್ಚಚಿಸಿ ನ್ಯಾಯ ಒದಗಿಸಲು ಶ್ರಮಿಸುತ್ತೇನೆ ಎಂದರು. ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಂಚಾಲಕ ಗಂಗಾಧರ ಬಡಿಗೇರ, ತಾಲೂಕು ಅಧ್ಯಕ್ಷೆ ಲಕ್ಷ್ಮೀ ನಾಯ್ಕ, ಕಾರ್ಯದರ್ಶಿ ಅರ್ಚನಾ ನಾಯ್ಕ ಇತರರಿದ್ದರು.