ಜನಸಾಮಾನ್ಯರಿಗೆ ತೊಂದರೆ ತಪ್ಪಿಸಿ

10spt5
ಸೋಮವಾರಪೇಟೆ ತಾಲೂಕು ಕಚೇರಿಯ ತಹಸೀಲ್ದಾರ್ ಕೊಠಡಿಯ ಬಾಗಿಲಿನ ಸನಿಹ ಬಿಜೆಪಿ ಕಾರ್ಯಕರ್ತರು ಧರಣಿ ನಡೆಸಿದರು. ಗೌತಮ್, ಲೋಕೇಶ್ವರಿ ಗೋಪಾಲ್, ಮಹೇಶ್ ತಿಮ್ಮಯ್ಯ, ದರ್ಶನ್, ಶರತ್, ಮಹೇಶ್ ಇದ್ದರು.
Published on

ಸೋಮವಾರಪೇಟೆ: ತಾಲೂಕು ಸರ್ಕಾರಿ ಆಸ್ಪತ್ರೆಗೆ ತಜ್ಞ ವೈದ್ಯರನ್ನು ನೇಮಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಕೂಡಲೇ ಆಸ್ಪತ್ರೆಗೆ ವೈದ್ಯರನ್ನು ನಿಯೋಜಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ವಿಧಾನಪರಿಷತ್ತಿನ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಮಾತನಾಡಿ, ತಾಲೂಕು ಕೇಂದ್ರ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಹಲವು ಸಮಯದಿಂದ ವೈದ್ಯರಿಲ್ಲದೆ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಇರುವ ವೈದ್ಯರು ಆಸ್ಪತ್ರೆಗೆ ಬರುವ ರೋಗಿಗಳನ್ನು ಮಡಿಕೇರಿ, ಮೈಸೂರು ಹಾಗೂ ಮಂಗಳೂರಿಗೆ ಕಳುಹಿಸುತ್ತಿದ್ದಾರೆ. ಇದರಿಂದ ಬಡ ರೋಗಿಗಳಿಗೆ ತುಂಬ ತೊಂದರೆ ಆಗಿದೆ. ಇದೆಲ್ಲದರ ಅರಿವಿದ್ದರೂ ಸ್ವತಃ ವೈದ್ಯರಾಗಿರುವ ಶಾಸಕರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು.

ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್ ಮಾತನಾಡಿ, ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ತಕ್ಷಣವೇ ತಜ್ಞ ವೈದ್ಯರನ್ನು ನೇಮಕ ಮಾಡಬೇಕು. ಇಲ್ಲವಾದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು. ನಂತರ ಮೆರವಣಿಗೆಯಲ್ಲಿ ತಾಲೂಕು ಕಚೇರಿಗೆ ತೆರಳಿದ ಪ್ರತಿಭಟನಾಕಾರರು ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಜಿಲ್ಲಾ ಉಪಾಧ್ಯಕ್ಷ ಮನುಕುಮಾರ್ ರೈ, ಕಾರ್ಯದರ್ಶಿಗಳಾದ ದರ್ಶನ್ ಜಯಪ್ಪ, ಶರತ್, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತಾ ವಿರೂಪಾಕ್ಷ, ಪ್ರಮುಖರಾದ ಲೋಕೇಶ್ವರಿ ಗೋಪಾಲ್ ಪಿ.ಕೆ. ಚಂದ್ರು, ಮತ್ತಿತರರು ಇದ್ದರು.

ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲು ಪ್ರತಿಭಟನಾಕಾರರು ತಾಲೂಕು ಕಚೇರಿಗೆ ಮುಂಭಾಗಕ್ಕೆ ತೆರಳಿದ ಸಂದರ್ಭ, ಮನವಿ ಸ್ವೀಕರಿಸಲು ತಹಸೀಲ್ದಾರ್ ನವೀನ್‌ಕುಮಾರ್ ತಡ ಮಾಡಿದರು ಎಂದು ಆರೋಪಿಸಿ ಪ್ರತಿಭಟನಾಕಾರರು ತಹಸೀಲ್ದಾರ್ ವಿರುದ್ಧ ಧಿಕ್ಕಾರ ಕೂಗಿ ಧರಣಿ ನಡೆಸಿದರು. ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಹಾಗೂ ರೈತರು ತಹಸೀಲ್ದಾರ್ ಅವರೊಂದಿಗೆ ಚರ್ಚೆ ಹಾಗೂ ವಾಗ್ವಾದದಲ್ಲಿ ತೊಡಗಿದ್ದ ಸಂದರ್ಭ ಇಕ್ಕಟ್ಟಿನಲ್ಲಿ ಸಿಲುಕಿದ ತಹಸೀಲ್ದಾರ್ ಕೊಠಡಿಯಿಂದ ಹೊರ ಬರಲಾಗದೆ ಪರದಾಡಿದರು. ಕಚೇರಿ ಮುಂಭಾಗ ಅರ್ಧಗಂಟೆ ಕಾಯ್ದ ಪ್ರತಿಭಟನಾಕಾರರು ಅಕ್ರೋಶಗೊಂಡು ತಹಸೀಲ್ದಾರ್ ಕೊಠಡಿಗೆ ನುಗ್ಗುವ ಪ್ರಯತ್ನ ಮಾಡಿದರು. ಪೊಲೀಸರು ತಡೆಯೊಡ್ಡಿದ ಹಿನ್ನೆಲೆಯಲ್ಲಿ ಕೊಠಡಿ ಬಾಗಿಲಿನ ಸನಿಹ ಧರಣಿ ಮಾಡಿ ಧಿಕ್ಕಾರ ಕೂಗಿದರು. ನಂತರ ತಹಸೀಲ್ದಾರ್ ಪ್ರತಿಭಟನಾ ಸ್ಥಳಕ್ಕೆ ತೆರಳಿ ತಡವಾಗಿದ್ದಕ್ಕೆ ಸಮಜಾಯಿಷಿ ನೀಡಿ ಮನವಿ ಪತ್ರ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net