ಜನರು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಅಗತ್ಯವಿದೆ: ಡಿಆರ್‌ಡಿಒದ ರಾಜಲಕ್ಷ್ಮಿ ಮೆನನ್

Raghu_28_Graduation_Ceremony_@_BMCRI (3)
Published on

ಬೆಂಗಳೂರು: ಸಾಮಾಜಿಕ ಜಾಲತಾಣಗಳ ಬಳಕೆಯಿಂದಾಗಿ ಜನರ ಮಾನಸಿಕ ಸ್ವಾಸ್ಥ್ಯ ಹದಗೆಡುತ್ತಿದೆ. ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ ಎಂದು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ವೈಮಾನಿಕ ವ್ಯವಸ್ಥೆಗಳ ವಿಭಾಗದ ಮಹಾನಿರ್ದೇಶಕಿ ರಾಜಲಕ್ಷ್ಮಿ ಮೆನನ್ ಹೇಳಿದರು.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಅವಿರತ’ ಪದವಿ ಪ್ರದಾನ ಸಮಾರಂಭದಲ್ಲಿ ಅವರು, 2021-22ನೇ ಸಾಲಿನ 256 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

ಜನಸಾಮಾನ್ಯರ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ವೈದ್ಯರು ಶ್ರಮಿಸಬೇಕಿದೆ. ಬಡ ರೋಗಿಗಳಿಗೆ ನೆರವಾಗುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಕೊಡುಗೆ ನೀಡಬೇಕಿದೆ. ಈಗ ಕೌಶಲ ಪ್ರದರ್ಶಿಸಲು ಸಾಕಷ್ಟು ಅವಕಾಶಗಳಿದ್ದು, ದೊರೆತ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವೈದ್ಯರಿಗೆ ಕಲಿಕೆ ನಿರಂತರ ಪ್ರಕ್ರಿಯೆ ಎಂದು ಕಿವಿಮಾತು ಹೇಳಿದರು.

ಇದೇ ವೇಳೆ 2047ಕ್ಕೆ ದೇಶ ವಿಕಸಿತ ಭಾರತವಾಗಲು ವೈದ್ಯರ ಕೊಡುಗೆ ಅಪಾರವಾಗಿದ್ದು, ಈ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಸ್ನಾತಕ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಮುಂದಿನ ತಮ್ಮ ಸೇವೆಯನ್ನು ದೇಶಕ್ಕಾಗಿ ಮುಡುಪಾಗಿಡಬೇಕು ಎಂದು ಕರೆ ನೀಡಿದರು.

ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ.ಬಿ.ಎಲ್. ಸುಜಾತಾ ರಾಥೋಡ್ ಮಾತನಾಡಿ, ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ವೈದ್ಯರಾದವರು ರೋಗಿಗಳ ಜೀವನದಲ್ಲಿ ಕತ್ತಲು ಹೋಗಲಾಡಿಸಿ, ಬೆಳಕು ಚೆಲ್ಲಬೇಕು. ಆರೋಗ್ಯಯುತ ದೇಶ ನಿರ್ಮಾಣಕ್ಕೆ ಶ್ರಮಿಸಬೇಕು ಎಂದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್) ಮಾಜಿ ಕುಲಪತಿ ಡಾ.ಎಸ್. ಸಚ್ಚಿದಾನಂದ ಮಾತನಾಡಿ, ಬೆಂಗಳೂರು ವೈದ್ಯಕೀಯ ಕಾಲೇಜು ದೇಶದ ಪ್ರಮುಖ ಕಾಲೇಜುಗಳಲ್ಲಿ ಒಂದಾಗಿದೆ. ವೈದ್ಯಕೀಯ ಪದವಿ ಪಡೆದ ಪ್ರತಿಯೊಬ್ಬರೂ ತಮ್ಮ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಹೆಜ್ಜೆಯಿಡಬೇಕು ಎಂದು ಹೇಳಿದರು.

ಇದೇ ವೇಳೆ 8 ಮಂದಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು ಸೇರಿ ಒಟ್ಟು 256 ಮಂದಿ ಸ್ನಾತಕೋತ್ತರ ಪದವಿ ಪಡೆದರು. ಬಿಎಂಸಿಆರ್‌ಐ ಡೀನ್ ಮತ್ತು ನಿರ್ದೇಶಕ ಡಾ. ಕೆ. ರಮೇಶ್ ಕೃಷ್ಣ, ಮಿಂಟೊ ಆಸ್ಪತ್ರೆಯ ನಿರ್ದೇಶಕ ಡಾ. ನಾಗರಾಜು, ವೈದ್ಯಕೀಯ ಅಧೀಕ್ಷಕ ಡಾ.ಸುರೇಶ್ ಬಾಬು, ವಾಣಿವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸಿ. ಸವಿತಾ, ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದೀಪಕ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net