ಆವಿನಮಡುಗು ಕೆರೆ ಹೂಳು ತೆಗೆಸಿ ನೀರು ಹರಿಸಿ, ಶಾಸಕ ತುಕಾರಾಮ್‌ಗೆ ಬಸವಕುಮಾರ ಸ್ವಾಮೀಜಿ ಒತ್ತಾಯ

020320 Sanduru E Tukaram Development Works Programmee
Published on

ಸಂಡೂರು: ಅಂತಾಪುರ ಗ್ರಾಮದಲ್ಲಿ ಹೆರಿಗೆ ಆಸ್ಪತ್ರೆ, ವಿಠಲಾಪುರ ಬಳಿಯ ಆವಿನಮಡುಗು ಕೆರೆ ಹೂಳು ತೆಗೆದು ತುಂಗಭದ್ರಾ ನದಿಯಿಂದ ನೀರು ಹರಿಸಬೇಕು ಎಂದು ಶಾಸಕ ಇ.ತುಕಾರಾಮ್‌ಗೆ ಶ್ರೀಶೈಲ ಶಾಖಾ ಮಠದ ಬಸವಕುಮಾರ ಸ್ವಾಮೀಜಿ ಒತ್ತಾಯಿಸಿದರು.

ತಾಲೂಕಿನ ಅಂತಾಪುರ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಸಕ ಇ.ತುಕಾರಾಮ್ ಮಾತನಾಡಿ, ಅಂತಾಪುರ, ವಿಠಲಾಪುರ, ಮೆಟ್ರಿಕಿ, ರಾಜಾಪುರ ಗ್ರಾಪಂ ವ್ಯಾಪ್ತಿಯ 25ಕ್ಕೂ ಹೆಚ್ಚು ಗ್ರಾಮಗಳಿಗೆ ಶಾಶ್ವತ ಕುಡಿವ ನೀರು ಒದಗಿಸಲು 56 ಕೋಟಿ ರೂ.ವೆಚ್ಚದ ಬಹುಗ್ರಾಮ ಕುಡಿವ ನೀರು ಯೋಜನೆಗೆ ಅನುಮೋದನೆ ದೊರೆತಿದೆ. ಆವಿನಮಡುಗು ಕೆರೆಯ ಹೂಳು ತೆರವುಗೊಳಿಸಲಾಗುವುದು. ಗ್ರಾಮದಲ್ಲಿ 10 ಹಾಸಿಗೆಗಳ ಆಸ್ಪತ್ರೆ ಹಾಗೂ 110 ಕೆವಿ ವಿದ್ಯುತ್ ಉಪಕೇಂದ್ರ ಆರಂಭಿಸುವುದಾಗಿ ಭರವಸೆ ನೀಡಿದರು.

ಜಿಪಂ ಮಾಜಿ ಸದಸ್ಯ ಲಕ್ಷಣ, ಜಿಪಂ ಸದಸ್ಯೆ ಸೌಭಾಗ್ಯ ತಿರುಮಲ, ಬಿಜೆಪಿ ಮುಖಂಡ ಎಂ.ತಿರುಮಲ ಮಾತನಾಡಿದರು. ಕೆಪಿಟಿಸಿಎಲ್ ಕ್ರಾಸ್-ಸುಲ್ತಾನಪುರ-ಮೆಟ್ರಿಕಿವರೆಗೆ, ಅಂತಾಪುರ, ವಿಠಲಾಪುರದಲ್ಲಿ ಸಿಸಿ, ಡಾಂಬರ್ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಚಾಲನೆ ನೀಡಿದರು. ಕೆರೆರಾಂಪುರದಲ್ಲಿ ಕೆಕೆಆರ್‌ಡಿಬಿಯಡಿ ನಿರ್ಮಿಸಿದ ಎರಡು ಶಾಲಾ ಕೊಠಡಿಗಳನ್ನು ಉದ್ಘಾಟಿಸಿದ ಶಾಸಕ ಇ.ತುಕಾರಾಮ್, ಶಾಲೆಗಾಗಿ 1 ಎಕರೆ ಜಮೀನು ನೀಡಿದ ತಾಪಂ ಮಾಜಿ ಸದಸ್ಯೆ ಹೇಮಾವತಿ ಹೊನ್ನೂರುಸ್ವಾಮಿಯನ್ನು ಸನ್ಮಾನಿಸಿದರು. ಗ್ರಾಪಂ ಅಧ್ಯಕ್ಷ ಜಿ.ಬಸವರಾಜ, ಸ್ಥಳೀಯ ಮುಖಂಡ ಅಸ್ಲಂ ಬಾಷಾ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net