

ಹೊಸಕೋಟೆ : ನಗರದ ಐತಿಹಾಸಿಕ ಶ್ರಿ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಮುಂಜಾನೆ ದೇವಸ್ಥಾನದಿಂದ ಶ್ರೀ ಅವಿಮುಕ್ತೇಶ್ವರಸ್ವಾಮಿ ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಬೃಹತ್ ರಥದಲ್ಲಿ ಪ್ರತಿಷ್ಠಾಪಿಸಿ, ಮಡಿತೇರಿನ ಉತ್ಸವಕ್ಕೆ ಶಾಸಕ ಶರತ್ ಬಚ್ಚೇಗೌಡ ಪೂಜೆ ಸಲ್ಲಿಸಿ, ಚಾಲನೆ ನೀಡಿದರು. ಬಳಿಕ ಭಕ್ತರು ರಥ ಎಳೆದು ಭಕ್ತಿ ಸಮರ್ಪಿಸಿದರು. ಇದೇವೇಳೆ ರಥಕ್ಕೆ ಕಲ್ಲುಪ್ಪು, ಕಾಳುಮೆಣಸು ಹಾಗೂ ಬಾಳೆಹಣ್ಣು ಎಸೆದು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.
ರಥವು ಗಾಣಿಗರ ಪೇಟೆ, ದರ್ಜಿಪೇಟೆ, ಕುರುಬರ ಪೇಟೆ, ಮೇಲಿನ ಪೇಟೆ, ಕೆಆರ್ ವೃತ್ತದ ಮುಖಾಂತರ ಸಾಗಿ, ಸಂಜೆ 7.30ಕ್ಕೆ ಮೂಲಸ್ಥಾನಕ್ಕೆ ಮರಳಿತು. ಮೆರವಣಿಗೆಯುದ್ದಕ್ಕೂ ಭಕ್ತರು ಹೆಜ್ಜೆ ಹಾಕಿದರು. ಹೊರ ರಾಜ್ಯದಿಂದಲೂ ಭಕ್ತರು ಆಗಮಿಸಿ, ಸ್ವಾಮಿಯ ದರ್ಶನ ಪಡೆದರು. ರಥೋತ್ಸವ ಹಿನ್ನೆಲೆಯಲ್ಲಿ ಮಕ್ಕಳ ಆಟದ ಸಾಮಗ್ರಿಗಳು, ಜಾಯಿಂಟ್ ವೀಲ್, ರಾಟೆಗಳು, ಮನರಂಜನಾ ಕಾರ್ಯಕ್ರಮಗಳು ಎಲ್ಲೆಲ್ಲೂ ಜೋರಾಗಿದ್ದವು. ಪೊಲೀಸ್ ಇಲಾಖೆ ಬಂದೋಬಸ್ತ್ ಒದಗಿಸಿತ್ತು. ಜನಸಂದಣಿ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು.
ನಾಡು ಸುಭಿಕ್ಷವಾಗಿರುವ ವಿಶ್ವಾಸ : ಬೆಳಗ್ಗೆ 11.30ರಲ್ಲಿ ಮಡಿ ತೇರಿಗೆ ಪೂಜೆ ಸಲ್ಲಿಸಿ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ, ಐತಿಹಾಸಿಕ ಶ್ರೀ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಶ್ರೀ ದ್ರೌಪದಿ ದೇವಿ ಕರಗ ಮಹೋತ್ಸವದಲ್ಲಿ ಜಾತಿ ಜನಾಂಗ, ಧರ್ಮ ಭೇದವಿಲ್ಲದೆ ತಾಲೂಕು, ಜಿಲ್ಲೆ, ರಾಜ್ಯ ಹೊರ ರಾಜ್ಯ, ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. ಈ ಬಾರಿಯ ಹಬ್ಬದ ಸೂಚನೆ ತಾಲೂಕಿನಲ್ಲಿ ಹಾಗೂ ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಿಂದ ಸುಭಿಕ್ಷವಾಗಿರುವ ಸೂಚನೆಯಿದ್ದು, ಶ್ರದ್ಧೆಯಿಂದ ಪ್ರಕೃತಿಯನ್ನು ಆರಾಧಿಸಿದರೆ ದೇವರ ಆಶೀರ್ವಾದ ನಮ್ಮೆಲ್ಲರ ಮೇಲಿರಲಿದೆ ಎಂದರು. ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ, ರಥೋತ್ಸವ ಸಮಿಪಿಯ ಕೇಶವ್ ಮೂರ್ತಿ, ಸದಸ್ಯ ತಹಸೀಲ್ದಾರ್ ಸೋಮಶೇಖರ್ ಇದ್ದರು.
ಪೌರಕಾರ್ಮಿಕರಿಂದ ಸ್ವಚ್ಛತೆಗೆ ಆದ್ಯತೆ : ರಥ ಸಾಗುವ ಮಾರ್ಗದಲ್ಲಿ ನಗರಸಭೆಯು ಸ್ವಚ್ಛತೆಗೆ ಆದ್ಯತೆ ನೀಡಿತ್ತು. ಸ್ವಚ್ಛತೆ ಕಾಪಾಡಲು ಪೌರ ಕಾರ್ಮಿಕರುಅವಿರತ ಶ್ರಮಿಸಿದರು.