

ಮಂಡ್ಯ: ರಾಜ್ಯದ ಕೆಲವು ಭಾಗಗಳಲ್ಲಿ ಹಕ್ಕಿಜ್ವರ ವರದಿಯಾಗಿದೆ. ಆದರೆ ಜಿಲ್ಲೆಯಲ್ಲಿ ಯಾವುದೇ ಪ್ರಕರಣ ಕಂಡುಬಂದಿಲ್ಲ. ಈ ನಿಟ್ಟಿನಲ್ಲಿ ಕೋಳಿ ಸಾಕಾಣಿಕೆದಾರರು ಹಕ್ಕಿಜ್ವರ ಹರಡದಂತೆ ಪಶುಸಂಗೋಪನಾ ಇಲಾಖೆ ಹೊರಡಿಸಿರುವ ಮುನ್ನೆಚ್ಚರಿಕಾ ಕ್ರಮ ಅನುಸರಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೋಳಿಜ್ವರ ನಿಯಂತ್ರಣ ಸಂಬಂಧ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋಳಿ ಶೀತ ಜ್ವರ ತಗುಲಿದ ಪಕ್ಷಿಯ ಶ್ವಾಸೇಂದ್ರಿಯ, ಕಣ್ಣಿನ ಪೊರೆ ಮತ್ತು ಹಿಕ್ಕೆಗಳಿಂದ ವೈರಸ್ ಅನ್ನು ಹೊರಹಾಕುತ್ತದೆ. ಇದರಿಂದ ಒಂದು ಪಕ್ಷಿಯಿಂದ ಇನ್ನೊಂದು ಪಕ್ಷಿಗೆ ರೋಗ ಹರಡುತ್ತದೆ ಎಂದರು.
ಜಿಲ್ಲೆಯಲ್ಲಿ ಹಾಲಿ ಕಾರ್ಯನಿರ್ವಹಣೆಯಲ್ಲಿರುವ 420 ಫಾರ್ಮ್‌ನಲ್ಲಿ 25,19,050 ಮಾಂಸದ ಹಾಗೂ 23 ಫಾರ್ಮ್‌ನಲ್ಲಿ ಮೊಟ್ಟೆ ಕೋಳಿ, ಮನೆಯಲ್ಲಿ 5,99,333 ಸಾಕು ಕೋಳಿಗಳಿವೆ. ಇವುಗಳ ಬಗ್ಗೆ ಆಯಾ ತಾಲೂಕಿನಲ್ಲಿ ನಿಗಾ ವಹಿಸಲು ತಂಡ ರಚಿಸಿ. ಇದಲ್ಲದೆ ಸಾಕಾಣಿಕೆಯ ವಿಭಾಗಕ್ಕೆ ಬಾರದೆ ಇರುವ ಕಾಡು ಪಕ್ಷಿ, ಕೆರೆ ಕಟ್ಟೆ ಪಕ್ಷಿಧಾಮದ ಬಳಿ ವಾಸಿಸುವ ಪಕ್ಷಿಗಳಲ್ಲಿ ರೋಗದ ಲಕ್ಷಣ ಅಥವಾ ಕೋಳಿ ಜ್ವರ ಕಂಡು ಬಂದಲ್ಲಿ ತಕ್ಷಣ ಕ್ರಮವಹಿಸಲು ತಂಡ ರಚಿಸಿ ಎಂದರು.
ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿ ಕೊಡಬೇಡಿ. ಕೋಳಿ ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಬಹುದು. ಫಾರ್ಮ್‌ನಲ್ಲಿ ಕೆಲಸ ನಿರ್ವಹಿಸುವ ಕೆಲಸಗಾರರು ಕೋಳಿಗಳ ಜತೆ ನಿಕಟ ಸಂಪರ್ಕದಲ್ಲಿರುತ್ತಾರೆ. ಆದ್ದರಿಂದ ಅವರಿಗೆ ಕೋಳಿ ಜ್ವರದ ಬಗ್ಗೆ ಹೆಚ್ಚಿನ ಜಾಗೃತಿ ಕಾರ್ಯಕ್ರಮ ನಡೆಸಿ. ಜಿಲ್ಲೆಯಲ್ಲಿ ಕೋಳಿ ಜ್ವರ ಪ್ರಕರಣ ದಾಖಲಾದರೆ, ಅವುಗಳನ್ನು ವೈಜ್ಞಾನಿಕ ವಿಧಾನದಿಂದ ಮಣ್ಣು ಮಾಡುವುದಕ್ಕೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಜ್ವರ ಪತ್ತೆಯಾದ ಜಾಗದಿಂದ 1 ಕಿ.ಮೀ ವ್ಯಾಪ್ತಿಯನ್ನು ಇನ್‌ಫೆಕ್ಟೆಡ್ ರೆನ್ ಎಂದು ಪರಿಗಣಿಸಲಾಗುವುದು. ಈ ವ್ಯಾಪ್ತಿಯಲ್ಲಿ ಯಾವುದೇ ಪಕ್ಷಿ ಇರದಂತೆ ಹಾಗೂ ಬಾರದಂತೆ ಕ್ರಮ ವಹಿಸಲಾಗುವುದು. ಜಿಲ್ಲೆಯಲ್ಲಿ ಈಗಾಗಲೇ ವಿಶೇಷ ತಂಡ ರಚಿಸಿ ಕೋಳಿ ಫಾರ್ಮ್ ವಿವರ ತೆಗೆದುಕೊಳ್ಳಲಾಗಿದೆ. ಫಾರ್ಮ್ ಮಾಲೀಕರು ಕೋಳಿಗಳು ಅನುಮಾನಾಸ್ಪದವಾಗಿ ಸತ್ತು ಹೋದರೆ ಕೂಡಲೇ ಅಧಿಕಾರಿಗಳ ಗಮನಕ್ಕೆ ತರುವಂತೆ ಸೂಚಿಸಲಾಗಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಸುರೇಶ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.