

ರಿಪ್ಪನ್‌ಪೇಟೆ: ಓದಿನಿಂದ ಸಂಸ್ಕಾರ ಸಿಗತ್ತಿಲ್ಲವೆಂಬ ಶಿಕ್ಷಣ ತಜ್ಞರ ಆಲೋಚನೆಯಿಂದ ರೂಪುಗೊಂಡ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ವಿದ್ಯಾರ್ಥಿಗಳಿಗೆ ಬದುಕಿನ ಪಾಠ ಹೇಳಿಕೊಡುತ್ತವೆೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ ಸೆ.9ರಿಂದ 15ರವರೆಗೆ ಆಯೋಜಿಸಿದ್ದ ಎನ್‌ಎಸ್‌ಎಸ್ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಎನ್‌ಎಸ್‌ಎಸ್ ಒಂದು ವಿಶಿಷ್ಟ ಕಲಿಕೆೆಯಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಶ್ರಮದ ದುಡಿಮೆಯನ್ನು ಹಾಗೂ ಕೂಡಿಬಾಳುವ ಮನಸ್ಥಿತಿಯ ಜತೆಗೆ ಸ್ವಚ್ಛತೆ, ರಾಷ್ಟ್ರಪ್ರೇಮವನ್ನು ಪ್ರಾಯೋಗಿಕವಾಗಿ ಕಲಿಸಲಾಗುತ್ತದೆ ಎಂದರು.
ಶ್ರಮದ ದುಡಿಮೆಗೆ ಜನರು ಒಗ್ಗುತ್ತಿಲ್ಲ. ಜಮೀನು, ಹೋಟೆಲ್, ಗ್ಯಾರೇಜ್‌ಗಳಂತಹ ಕೆಲಸಗಳಿಗೆ ಆಸಕ್ತಿ ವಹಿಸುತ್ತಿಲ್ಲ. ಒಟ್ಟಾರೆಯಾಗಿ ಇಂದಿನ ಯುವ ಪೀಳಿಗೆ ಶ್ರಮದ ದುಡಿಮೆಯಿಂದ ವಿಮುಖರಾಗುತ್ತಿದ್ದು ಬಟ್ಟೆಯ ಇಸ್ತ್ರಿ ಹೋಗದೆ ದುಡಿಯಬೇಕು ಎಂಬ ಹಂಬಲ ಮೂಡಿದೆ. ದಾರಿಯಲ್ಲಿ ಬಿದ್ದ ಕಸ ತೆಗೆಯುವುದು ಮುಖ್ಯವಲ್ಲ, ಮೊದಲು ನಮ್ಮ ಮನಸ್ಸಿನ ಪರಿವರ್ತನೆಯಾಗಬೇಕು. ಶಿಬಿರ ಇಂತಹ ಚಿಕ್ಕಪುಟ್ಟ ಜೀವನದ ಅನೇಕ ಸಂಗತಿಗಳನ್ನು ಹೇಳಿಕೊಡುತ್ತದೆ. ರೈತನ ಮಗ ಓದಿದ ಮೇಲೆ ಗದ್ದೆ ಹೂಳುವುದು ಅವಮಾನ ಎಂದು ತಿಳಿದುಕೊಳ್ಳುವಂತಾದರೆ ಶಿಕ್ಷಣಕ್ಕೆ ಏನು ಬೆಲೆ? ಓದಿನಿಂದ ವಿದ್ಯಾರ್ಥಿಗಳಲ್ಲಿ ಅರಿವು ಮೂಡಬೇಕೆ ವಿನಃ ಜಂಬವಲ್ಲ ಎಂದು ಹೇಳಿದರು.
ಸಂವಿಧಾನದ ಪೀಠಿಕೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲಾಯಿತು. ಗ್ರಾಪಂ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಸದಸ್ಯ ಸುಂದರೇಶ, ಮುಖಂಡರಾದ ಎಂ.ಬಿ.ಮಂಜುನಾಥ, ಕೆ.ಸಿ.ತೇಜಮೂರ್ತಿ, ಹಸನಬ್ಬ, ಕಾರ್ಯಕ್ರಮಾಧಿಕಾರಿ ಎನ್.ಜೆ.ಪ್ರಕಾಶ್, ಉಪನ್ಯಾಸಕಿ ಪೂರ್ಣಿಮಾ ಇತರರಿದ್ದರು.
ಸ್ವಾರ್ಥಿಗಳಾದ ವಿದ್ಯಾವಂತರು
ಮನೆಯಲ್ಲಿ ಅವರವರ ಕೆಲಸ ಕಾರ್ಯಗಳನ್ನು ಮರೆತುಬಿಟ್ಟಿದ್ದೇವೆ. ಎಲ್ಲರ ಕೆಲಸವನ್ನು ಮಾಡುವ ಅಮ್ಮ ಮನೆಯಲ್ಲಿ ಉಚಿತ ಕೆಲಸಗಾರ್ತಿಯಾಗಿದ್ದಾಳೆ. ಈ ಮನಸ್ಥಿತಿ ಬದಲಾಗಬೇಕು. ನಮ್ಮ ಜೀವನವು ಮರಕ್ಕೆ ಅಂಟಿದ ಬಳ್ಳಿಯಂತೆ ಪರಾವಲಂಬಿಯಾಗದೆ ಸ್ವಾವಲಂಬನೆಗೆ ಆದ್ಯತೆ ನೀಡಬೇಕು. ವಿದ್ಯಾವಂತರು ಸ್ವಾರ್ಥಿಗಳಾಗಿದ್ದಾರೆ. ಹೃದಯವಂತರಾಗಲೇ ಇಲ್ಲ. ಭ್ರಷ್ಟಾಚಾರ ಮಾಡುವವರಿಗೆ ಗಳಿಸುವುದು ರಾಷ್ಟ್ರದ್ರೋಹ ಎನಿಸದಿದ್ದರೆ ಕಲಿತ ಶಿಕ್ಷಣದ ಪ್ರಯೋಜನವೇನು? ಎಂದು ಆರಗ ಜ್ಞಾನೇಂದ್ರ ವಿಷಾದ ವ್ಯಕ್ತಪಡಿಸಿದರು.