ಅಭಿವೃದ್ಧಿ ಹೆಸರಲ್ಲಿ ಪರಿಸರ ನಾಶ ಸಲ್ಲ

nature program
Published on

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಅಭಿವೃದ್ಧಿಯ ಹೆಸರಲ್ಲಿ ಹಾಗೂ ವೈಯಕ್ತಿಕ ಲಾಭಕ್ಕಾಗಿ ನಡೆಯುತ್ತಿರುವ ಮರಗಳ ಮಾರಣಹೋಮ ನಿಲ್ಲಬೇಕು. ಪ್ರತಿಯೊಬ್ಬರಲ್ಲೂ ಗಿಡಮರ ಬೆಳೆಸುವ ಮನೋಭಾವ ಮೂಡಿದಾಗ ಮಾತ್ರ ಪರಿಸರ ಸಂರಕ್ಷಣೆಯಾಗಿ ಜೀವಸಂಕುಲ ಉಳಿಯುವುದರ ಜತೆಗೆ ಅಂತರ್ಜಲ ಮಟ್ಟ ಹೆಚ್ಚಾಗಲಿದೆ ಎಂದು ಅಟಲ್ ಭೂ ಜಲ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ಸಮಿತಿ ಅಧ್ಯಕ್ಷ ಪಿ.ಬಿ.ಚಂದ್ರಶೇಖರ್ ಹೇಳಿದರು.
ತಾಲೂಕಿನ ಕಸಬಾ ಹೋಬಳಿ ದೊಡ್ಡಗಟ್ಟಿಗನಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂಜೇನ ಅಗ್ರಹಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಊರಿಗೊಂದು ವನ, ಕೆರೆ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಕುರಿತು ಹಮ್ಮಿಕೊಂಡಿದ್ದ ಜನ ಜಾಗೃತಿ ಕಾರ್ಯಮಕ್ರದಲ್ಲಿ ಮಾತನಾಡಿದರು ಮರ-ಗಿಡಗಳು ಮನುಷ್ಯನಿಗೆ ಶುದ್ಧಗಾಳಿ ನೀಡುತ್ತವೆ. ನೆರಳು, ಹಣ್ಣು ನೀಡಿ ನೆರವಾಗುತ್ತಿವೆ. ಆದರೆ ಮನುಷ್ಯ ದುರಾಸೆಯಿಂದ ಪರಿಸರ ನಾಶ ಮಾಡುತ್ತಿದ್ದಾನೆ. ಪರಿಸರದ ಉಳಿವಿಗಾಗಿ ಪ್ರತಿಯೊಬ್ಬರೂ ಒಂದೊಂದು ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಬೇಕು ಎಂದರು.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಮಕ್ಕಳನ್ನು ಬೆಳೆಸುವುದು, ಗುಡ್ ಮತ್ತು ಬ್ಯಾಡ್ ಟಚ್‌ಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸುವುದು. ಯಾರಾದರೂ ಅಸಭ್ಯ ವರ್ತನೆ ಮಾಡಿದರೆ ಅದನ್ನು ಹೊರಹಾಕಲಾಗದೆ ಮಗು ತನ್ನಲ್ಲಿಯೇ ಇಟ್ಟುಕೊಳ್ಳದೆ ಪಾಲಕರ ಬಳಿಯೂ ಹೇಳಿಕೊಳ್ಳುವ ಬಗೆ, ಯಾರ ಬಳಿ ದೂರು ಹೇಳಬೇಕು ಎಂಬಿತ್ಯಾದಿ ಬಗ್ಗೆ ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ಅರಿವು ಮೂಡಿಸಲಾಯಿತು.

ಜನಾಂದೋಲನ ಅಗತ್ಯ ಗ್ರಾಮಕ್ಕೆ ಒಂದು ಕೆರೆ ಇದ್ದರೆ ನೂರಾರು ಪ್ರಾಣಿಪಕ್ಷಿಗಳಿಗೆ, ಜಲಚರಗಳಿಗೆ ಆಸರೆಯಾಗುವುದರೊಂದಿಗೆ ರೈತರ ಕೃಷಿಗೆ ಅನುಕೂಲವಾಗುತ್ತದೆ. ಅಂತರ್ಜಲ ವೃದ್ಧಿಸುವ ಜೀವ ಸೆಲೆಯಾಗಿರುವ ಕೆರೆಗಳು ನೀರು ಕೊಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಮೀನುಗಾರಿಕೆ ಜತೆಗೆ ಹೈನುಗಾರಿಕೆಗೂ ಪ್ರೆರಕ ವಾತಾವರಣ ನಿರ್ಮಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ. ಕೆರೆಗಳು ಬೆಲೆಕಟ್ಟಲಾಗದ ಸಂಪನ್ಮೂಲಗಳಾಗಿವೆ ಕೆರೆಗಳ ಉಳಿವು ಜನಾಂದೋಲನ ಅಗತ್ಯವಿದೆ ಎಂದು ಪಿ.ಬಿ.ಚಂದ್ರಶೇಖರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net