ಕಿಮ್ಮತ್ತು ಕಳೆದುಕೊಂಡ ಹುಣಸೆ

24 BGV manju 1-Web
ಬೆಳಗಾವಿ ಗಾಂಧಿನಗರದ ಸಗಟು ಮಾರುಕಟ್ಟೆಯಲ್ಲಿ ಜರುಗಿದ ಹುಣಸೆ ವ್ಯಾಪಾರ ವಹಿವಾಟು.
Published on

ಬೆಳಗಾವಿ: ಇಂಧನ ದರ, ದಿನಸಿ ವಸ್ತುಗಳ ಬೆಲೆ, ಕಾರ್ಮಿಕರ ಕೂಲಿ ಹೆಚ್ಚಳದಿಂದ ಕಂಗಲಾಗಿರುವ ರೈತರು, ಸಗಟು ಮಾರುಕಟ್ಟೆಯಲ್ಲಿ ಹುಣಸೆ ದರ ಕುಸಿತದಿಂದಾಗಿ ದಿಕ್‌ಭ್ರಾಂತರಾಗಿದ್ದಾರೆ.

ಮಾವು, ದ್ರಾಕ್ಷಿ , ಗೋಡಂಬಿಯಂತೆ ವಾರ್ಷಿಕ ವಾಣಿಜ್ಯ ಬೆಳೆಯಾಗಿ ಹುಣಸೆಯನ್ನೂ ಕೂಡ ರೈತರು ಬೆಳೆಯುತ್ತಾರೆ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ನೀಡುವ ಲಾಭದಾಯಕ ಬೆಳೆಗಳಲ್ಲಿ ಹುಣಸೆ ಒಂದು. ಇದೀಗ ಹಂಗಾಮಿನಲ್ಲೇ ದರ ಕುಸಿತದಿಂದ ಹುಣಸೆ ಬೆಳೆ ಕಿಮ್ಮತ್ತು ಕಳೆದುಕೊಂಡಿದೆ. ಮಾ. 24ರಂದು ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ. ಹುಣಸೆಗೆ ಕನಿಷ್ಠ 65ರಿಂದ ಗರಿಷ್ಠ 90 ರೂ. ದರವಿದೆ.

4 ಸಾವಿರ ರೂ. ಕುಸಿತ: 2021-22ನೇ ಸಾಲಿನ ಹುಣಸೆ ಹಂಗಾಮಿನ ಆರಂಭದಲ್ಲಿ ಕ್ವಿಂಟಾಲ್ 8,500 ರಿಂದ 12,000 ರೂ. ವರೆಗೆ ದರ ಇತ್ತು. ಆದರೆ, ಇದೀಗ ಏಕಾಏಕಿ ಕ್ವಿಂಟಾಲ್‌ಗೆ ಕನಿಷ್ಠ 6,500 ರಿಂದ ಗರಿಷ್ಠ 7,800 ರೂಪಾಯಿ ಇಳಿಕೆ ಕಂಡಿದೆ. ಕೇವಲ ಒಂದು ತಿಂಗಳ ಅವಧಿಯಲ್ಲಿ ಸರಾಸರಿ 4 ಸಾವಿರ ರೂಪಾಯಿ ಕುಸಿತ ಕಂಡಿದೆ.

ರಾಜ್ಯದಲ್ಲಿ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಳಗಾವಿ, ವಿಜಯಪುರ, ಧಾರವಾಡ ಜಿಲ್ಲೆಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಹುಣಸೆ ಬೆಳೆಯಾಲಾಗುತ್ತಿದೆ. ರಾಜ್ಯದ ಇತರೆ ಜಿಲ್ಲೆಗಳಲ್ಲಿ ಹುಣಸೆ ಬೆಳೆಯುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಇಳವರಿ ಬರುತ್ತಿಲ್ಲ. ಪ್ರಸಕ್ತ ವರ್ಷ ಸಗಟು ಮಾರುಕಟ್ಟೆಗಳಲ್ಲಿ ಹುಣಸೆ ದರ ಕುಸಿತದಿಂದಾಗಿ ವ್ಯಾಪಾರಿಗಳು ಹಾಗೂ ರೈತರಿಗೆ ಅಧಿಕ ಪ್ರಮಾಣದಲ್ಲಿ ನಷ್ಟವಾಗಿತ್ತು.

ಹುಣಸೆ ಒಕ್ಕಣಿಕೆ: ಡಿಸೆಂಬರ್, ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳವರೆಗೂ ಮರವೇರಿ ಹುಣಸೆ ಕಟಾವು ಮಾಡಲಾಗುತ್ತದೆ. ಬಳಿಕ ಹಸಿಹುಣಸೆಯನ್ನು ಬಿಸಿಲಿಗೆ ಹಾಕಿ ಒಣಗಿಸಲಾಗುತ್ತದೆ. ನಂತರ ಸಿಪ್ಪೆಯನ್ನು ಬಡಿದು, ಹಣ್ಣನ್ನು ಕುಟ್ಟಿ ಅದರೊಳಗಿರುವ ಬೀಜವನ್ನು ಬೇರ್ಪಡಿಸುವ ಹಾಗೂ ಶುಚಿಗೊಳಿಸುವ ಕೆಲಸ ಮಾಡಬೇಕಾಗುತ್ತದೆ. ಬೆಳೆಗಾರರಿಗೆ ಕ್ವಿಂಟಾಲ್ ಹುಣಸೆಹಣ್ಣನ್ನು ಸಿದ್ಧ ಮಾಡಲು 3,500 ರೂ. ವೆಚ್ಚ ತಗುಲುತ್ತದೆ.

ಆದಾಯ ತರದ ಬೆಳೆ: ದಲ್ಲಾಳಿಗಳು ಮರದಲ್ಲಿನ ಇಳುವರಿ ನೋಡಿಕೊಂಡು ಹುಣಸೆ ಹಣ್ಣಿನ ಬೆಳೆಗೆ ಕ್ವಿಂಟಾಲ್‌ಗೆ 4,500 ರಿಂದ 5,000 ರೂ.ವರೆಗೂ ದರ ನಿಗದಿ ಮಾಡಿ ಖರೀದಿ ಮಾಡುತ್ತಾರೆ. ಆದರೆ, ಸದ್ಯ ಹಾಕಿದ ಬಂಡವಾಳಕ್ಕಿಂತಲೂ ಕಡಿಮೆ ಹಣಕ್ಕೆ ಹುಣಸೆಹಣ್ಣು ಮಾರುವ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ಬೆಳೆಗಾರ ವೆಂಕಪ್ಪ ನಾರಾಯಣ ಗೊಲ್ಲರಹಟ್ಟಿ ಹಾಗೂ ಶಿವಪ್ಪ ಎಂ. ಮಳಲಿ.

ಉತ್ಪಾದನೆ ಜಾಸ್ತಿ, ಕಡಿಮೆಯಾದ ಬೇಡಿಕೆ

ಕಳೆದ ಹಲವು ವರ್ಷಗಳಿಂದ ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ಸೇರಿದಂತೆ ಇತರೆ ರಾಜ್ಯಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಹುಣಸೆ ಉತ್ಪಾದನೆಯಾಗುವುದರಿಂದ ರಾಜ್ಯದಲ್ಲಿನ ಹುಣಸೆಗೆ ಬಲು ಬೇಡಿಕೆಯಿತ್ತು. ಹಾಗಾಗಿ ಕ್ವಿಂಟಾಲ್‌ಗೆ 20 ಸಾವಿರ ರೂ. ವರೆಗೂ ಮಾರಾಟವಾಗುತಿತ್ತು. ಆದರೆ, ಇತ್ತೀಚೆಗಿನ ವರ್ಷಗಳಲ್ಲಿ ನೆರೆಯ ಎಲ್ಲ ರಾಜ್ಯಗಳಲ್ಲಿ ಹುಣಸೆ ಉತ್ಪಾದನೆ ಪ್ರಮಾಣ ಹೆಚ್ಚಾಗಿದ್ದರಿಂದ ಕರ್ನಾಟಕದ ಹುಣಸೆಗೆ ಮೊದಲಿದ್ದ ಬೇಡಿಕೆ ಕಡಿಮೆಯಾಗಿದೆ. ಹಾಗಾಗಿ ನಮ್ಮಲ್ಲಿ ಉತ್ಪಾದನೆ ಜಾಸ್ತಿಯಿದ್ದು, ಬೇಡಿಕೆ ಕಡಿಮೆಯಾಗಿದ್ದರಿಂದ ದರ ಇಳಿಕೆಯಾಗಲು ಪ್ರಮುಖ ಕಾರಣ ಎನ್ನಲಾಗಿದೆ.

ಪ್ರತಿ ಶನಿವಾರ ಮತ್ತು ಬುಧವಾರ ಬೆಳಗಾವಿ ಮಾರುಕಟ್ಟೆಗೆ ವಿಜಯಪುರ, ಬಾಗಲಕೋಟೆ, ಧಾರವಾಡ, ಬೆಳಗಾವಿ ಸೇರಿದಂತೆ ವಿವಿಧ ಭಾಗಗಳಿಂದ ಸುಮಾರು 10 ಟನ್‌ವರೆಗೆ ಹುಣಸೆ ಬರುತ್ತದೆ. ತೆಲಂಗಾಣ, ಆಂಧ್ರದಲ್ಲಿ ಹುಣಸೆ ಉತ್ಪಾದನೆ ಹೆಚ್ಚಾಗಿದ್ದರಿಂದ ನಮ್ಮ ರಾಜ್ಯದ ಹುಣಸೆಗೆ ಬೇಡಿಕೆ ಕಡಿಮೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ದರ ಭಾರಿ ಇಳಿಕೆಯಾಗಿದೆ.| ಮನೋಜಕುಮಾರ ಮತ್ತಿಕೊಪ್ಪ ಹುಣಸೆ ಸಗಟು ವ್ಯಾಪಾರಿ, ಬೆಳಗಾವಿ

| ಮಂಜುನಾಥ ಕೋಳಿಗುಡ್ಡ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net