ಆವನಿಯ ಶ್ರೀಕಾಮಾಕ್ಷಿ ದೇವಿ ಸಮೇತ ಪ್ರಸನ್ನ ಶ್ರೀರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿ

23 mbl ph 1
Published on

ಮುಳಬಾಗಿಲು: ತಾಲೂಕಿನ ಆವನಿಯ ಶ್ರೀಕಾಮಾಕ್ಷಿ ದೇವಿ ಸಮೇತ ಪ್ರಸನ್ನ ಶ್ರೀರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವ ಭಾನುವಾರ ಭಕ್ತ ಸಾಗರದ ಮಧ್ಯೆ ವಿಜೃಂಭಣೆಯಿಂದ ನೆರವೇರಿತು.

ದೇವಾಲಯದ ಪ್ರಧಾನ ಅರ್ಚಕ ಕೆ.ಎಂ.ರಮಣಮೂರ್ತಿ ದೀಕ್ಷಿತ್, ಎಸ್.ಸುನೀಲ್‌ಕುಮಾರ್ ನೇತೃತ್ವದಲ್ಲಿ ಅರ್ಚಕರಿಂದ ವಿಶೇಷ ಪೂಜೆ ನೆರವೇರಿಸಿ ನಂತರ ರಥಕ್ಕೆ ಉತ್ಸವಮೂರ್ತಿಗಳನ್ನು ತಂದು ಪೂಜೆ ಸಲ್ಲಿಸಲಾಯಿತು.

ಕೀಲುಹೊಳಲಿ ಗ್ರಾಮದಿಂದ ದಲಿತರೇ ಪೂಜಿಸಿ ತರುವ ಸಲ್ಲಾಪುರಮ್ಮ ಉತ್ಸವ ಮೆರವಣಿಗೆ ಆವನಿಗೆ ಬಂದು ರಾಮಲಿಂಗೇಶ್ವರ ರಥಕ್ಕೆ ಸ್ಪರ್ಷಿಸಿದ ರಥ ಮುಂದೆ ಸಾಗಿತು. ಬೆಟ್ಟದಲ್ಲಿರುವ ಸೀತಾಪಾರ್ವತಿ ದೇವಾಲಯ, ವಾಲ್ಮೀಕಿ ಆಶ್ರಮ, ಆದಿಜಾಂಬವಂತನಿಗೆ ವಿಶೇಷ ಪೂಜೆ ನೆರವೇರಿತು.

ಆವನಿ ಶೃಂಗೇರಿ ಮಠದ ಜಗದ್ಗುರು ಶ್ರೀ ವಿಧ್ಯಾಶಂಕರ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ರಥಕ್ಕೆ ಚಾಲನೆ ನೀಡಿದರು. ಭಕ್ತರು ರಥಕ್ಕೆ ಹಣ್ಣು, ಕಾಯಿ ಸಮರ್ಪಣೆ ಮಾಡಿ ಓಂ ನಮಃ ಶಿವಾಯ, ಹರಹರ ಮಹದೇವ ಎಂಬ ಹರ್ಷೋದ್ಘಾರಗಳ ಮೂಲಕ ದೇವರ ಸ್ಮರಣೆ ಮಾಡಿದರು. ರಥಕ್ಕೆ ಬಾಳೆಹಣ್ಣು, ದವನ, ಉಪ್ಪು, ಮೆಣಸು ಎರಚಿ ಹರಕೆ ತೀರಿಸಿದರು.

ಆವನಿ ಸೀತಾಪಾರ್ವತಿ ಬೆಟ್ಟ ಹತ್ತುವ ಸ್ಥಳದಲ್ಲಿ, ರಥೋತ್ಸವಕ್ಕೆ ಬರುವ ಭಕ್ತರ ಮಧ್ಯೆ ನೂಕನುಗ್ಗಲು ಉಂಟಾಗಿತ್ತು. ಭಕ್ತರಿಗೆ ಸೇವಾ ಕರ್ತರು ಊಟದ ವ್ಯವಸ್ಥೆ ಮಾಡಿದ್ದರು. ಇದಲ್ಲದೆ ರಥ ಬೀದಿಗಳಲ್ಲಿ ಪಾನಕ ಮಜ್ಜಿಗೆ ಸೇರಿ ತಂಪು ಪಾನೀಯ ವಿತರಣೆ ಮಾಡಲಾಯಿತು.

ಸಚಿವ ಎಚ್.ನಾಗೇಶ್, ಸಂಸದ ಎಸ್.ಮುನಿಸ್ವಾಮಿ, ಜಿಪಂ ಅಧ್ಯಕ್ಷ ಸಿ.ಎಸ್.ಮುನಿಸ್ವಾಮಿ, ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್, ಜಿಪಂ ಸದಸ್ಯ ಆರ್.ಕೃಷ್ಣಪ್ಪ, ತಾಪಂ ಸದಸ್ಯ ರವಿಶಂಕರ್, ಗ್ರಾಪಂ ಅಧ್ಯಕ್ಷೆ ವಿ.ಮಂಜುಳಾ ಸುಬ್ಬರಾವ್, ಟಿಎಪಿಸಿಎಂಎಸ್ ಅಧ್ಯಕ್ಷ ಆಲಂಗೂರು ಶಿವಣ್ಣ, ಜೆಡಿಎಸ್ ಮುಖಂಡರಾದ ಸಮೃದ್ಧಿ ವಿ.ಮಂಜುನಾಥ್, ತಾಪಂ ಇಒ ಎಂ.ಬಾಬು, ಉಪತಹಸೀಲ್ದಾರ್ ಎಚ್.ಎಂ.ನಾರಾಯಣಸ್ವಾಮಿ, ಆರ್‌ಐ ಸಿ.ಸುಬ್ರಹ್ಮಣ್ಯಂ, ಗ್ರಾಮ ಲೆಕ್ಕಾಧಿಕಾರಿ ರಾಮಕುಮಾರ್, ದೇವಾಲಯದ ಆರ್‌ಐ ಸಿ.ಚೆಲುವಸ್ವಾಮಿ ಇದ್ದರು.

ಕೈಚಳಕ ತೋರಿದ ಕಳ್ಳರು: ರಥೋತ್ಸವ ಮತ್ತು ಜಾತ್ರೆಯಲ್ಲಿ ಪೊಲೀಸರು ಹಲವಾರು ಮುಂಜಾಗೃತಾ ಕ್ರಮ ಕೈಗೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಸರಗಳ್ಳರು ಜೋಬುಗಳ್ಳರ ಎಚ್ಚರಿಕೆ ನೀಡುತ್ತಿದ್ದರಿಂದ ಕಳವು ಪ್ರಕರಣಗಳು ಕಡಿಮೆಯಾಗಿದ್ದರೂ ಒಂದೆರಡು ಕಡೆ ಕಿಸೆಗಳ್ಳರು ಕೈಚಳಕ ತೋರಿಸಿರುವುದು ಕಂಡು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net