

ತುಮಕೂರು : ರಾಜ್ಯದ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ) ದಡಿ ಸೇವೆ ಸಲ್ಲಿಸುತ್ತಿರುವ ಆಯುಷ್ ವೈದ್ಯರ ಬದುಕು ಸರ್ಕಾರದ ಎಡವಟ್ಟಿನಿಂದಾಗಿ ಅತಂತ್ರವಾಗಿದೆ. ಇತ್ತ ಕಡೆ ಗೌರವಯುತ ವೇತನವೂ ಸಿಗದೆ, ಸೇವಾ ಭದ್ರತೆಯೂ ಇಲ್ಲದ ‘ತ್ರಿಶಂಕು’ಸ್ಥಿತಿಯಲ್ಲಿ 15 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿರುವ ಆಯುಷ್ ವೈದ್ಯರು ಸಿಲುಕಿದ್ದಾರೆ.
ಗ್ರಾಮೀಣ ಪಿಎಚ್‌ಸಿಗಳಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಆಯುಷ್ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ಮರುನೇಮಕ ಮಾಡಿ ರಾಜ್ಯ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿದೆ. ಆದರೆ, ಎಂಬಿಬಿಎಸ್ ವೈದ್ಯರ ಕೊರತೆ ಇದ್ದಾಗ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿದ್ದ ಆಯುಷ್ ವೈದ್ಯರನ್ನು ಆ ನಂತರ ಎನ್‌ಆರ್‌ಎಚ್‌ಎಂ ಅಡಿ ಆಯುಷ್ ವೈದ್ಯಾಧಿಕಾರಿಗಳನ್ನಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಸರ್ಕಾರದ ಹೊಸ ಆದೇಶದಲ್ಲಿ ಎನ್‌ಎಚ್‌ಎಂ ಅಡಿ ದುಡಿಯುತ್ತಿರುವ ಆಯುಷ್ ವೈದ್ಯರನ್ನು ಪರಿಗಣಿಸದೇ ಇರುವುದು ತೀರಾ ಅನ್ಯಾಯವೆನಿಸಿದೆ.
ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದಡಿ 2005 ರಿಂದ 2008ರವರೆಗೆ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದ ಆಯುಷ್ ವೈದ್ಯರನ್ನು ಗೌರವಯುತ ವೇತನ ನೀಡದೆ ದುಡಿಸಿಕೊಳ್ಳುತ್ತಿದ್ದು ಸೇವಾ ಭದ್ರತೆ ಒದಗಿಸಿಲ್ಲ. ಎಂಬಿಬಿಎಸ್ ವೈದ್ಯರನ್ನು ನೇಮಿಸಿಕೊಂಡ ಬಳಿಕ 2006ರಿಂದ ಸೇವೆ ಸಲ್ಲಿಸುತ್ತಿರುವ ಆಯುಷ್ ವೈದ್ಯರನ್ನು ಎನ್‌ಆರ್‌ಎಚ್‌ಎಂ ಅಡಿ ಸೇವೆಗೆ ವರ್ಗಾಯಿಸಲಾಯಿತಾದರೂ ವೇತನವನ್ನೇನೂ ಹೆಚ್ಚಿಸಲಿಲ್ಲ. ಕೇವಲ 6 ಸಾವಿರ ರೂ., ವೇತನದೊಂದಿಗೆ ಆರಂಭವಾಗಿ ಈಗ 22 ಸಾವಿರ ರೂ., ವೇತನ ಆಯುಷ್ ವೈದ್ಯರಿಗೆ ಸಿಗಲಿದೆ. ಈ ವೇಳೆ ಆಯುಷ್ ಇಲಾಖೆಗೆ ವಿಲೀನಗೊಳಿಸುವಂತೆ ಗುತ್ತಿಗೆ ವೈದ್ಯರು ಹಲವು ಬಾರಿ ಮನವಿ ಮಾಡಿದರೂ ಸರ್ಕಾರ ಕೈಚೆಲ್ಲಿತ್ತು.
61 ವೈದ್ಯರಿಗೆ ಅದೃಷ್ಟ: ಆಯುಷ್ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ 61 ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜ.15 ರಂದು ಆದೇಶ ಹೊರಡಿಸಿದೆ. ಈ ವೈದ್ಯರಿಗೆ ಮಾಸಿಕ 45 ಸಾವಿರ ರೂ., ವೇತನ ನಿಗದಿಪಡಿಸಲಾಗಿದೆ. ಹಾಗಾಗಿ, ದಕ್ಷಿಣ ಕನ್ನಡ, ಹಾಸನ, ತುಮಕೂರು, ಶಿವಮೊಗ್ಗ, ಕೊಡಗು, ಹಾವೇರಿ ಹಾಗೂ ಗದಗ ಜಿಲ್ಲೆಯ ವಿವಿಧ ಪಿಎಚ್‌ಸಿಗಳಲ್ಲಿ ಸೇವೆ ಸಲ್ಲಿಸುತ್ತಿರುವ 61 ಆಯುಷ್ ವೈದ್ಯರಿಗೆ ಅದೃಷ್ಟ ಒಲಿದಿದೆ. ಆದರೆ, 16 ವರ್ಷದಿಂದ ಆಯುಷ್ ವೈದ್ಯ ಪದ್ಧತಿಯನ್ನು ಮುಖ್ಯವಾಹಿನಿಗೆ ತರುತ್ತಿರುವ 90 ಎನ್‌ಎಚ್‌ಎಂ ಆಯುಷ್ ವೈದ್ಯರ ಸೇವಾ ಹಿರಿತನವನ್ನೇ ಕಡೆಗಣಿಸಲಾಗಿದೆ. ಸರ್ಕಾರದ ಹೊಸ ನೇಮಕಾತಿ ನಿರ್ಧಾರವು ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಇಟ್ಟಂತಾಗಿದೆ.
17 ವರ್ಷಗಳಿಂದ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎನ್‌ಎಚ್‌ಎಂ ಅಡಿ ಸೇವೆ ಸಲ್ಲಿಸುತ್ತಿರುವ ನಮ್ಮ ಸೇವಾ ಜ್ಯೇಷ್ಠತೆಯನ್ನು ರಾಜ್ಯ ಸರ್ಕಾರ ಪರಿಗಣಿಸಬೇಕು. ಕಳೆದೆರಡು ವರ್ಷಗಳಿಂದ ಕೋವಿಡ್ ಸಂದರ್ಭದಲ್ಲಿ ಪ್ರಾಣ ಒತ್ತೆಯಿಟ್ಟು ಆರೋಗ್ಯ ಸೇವೆ ನೀಡಿದ್ದು, ಸರ್ಕಾರ ನಮ್ಮ ಮನವಿಗೆ ಸ್ಪಂದಿಸಬೇಕು. ಡಾ.ಎಸ್.ಅನಿಲ್ ಕುಮಾರ್, ಆಯುಷ್ ವೈದ್ಯ ಸರ್ಕಾರದ ಆದೇಶಕ್ಕೆ ಅನುಗುಣವಾಗಿ ನೇಮಕ ಮಾಡಿಕೊಳ್ಳಲಾಗುವುದು. ಎನ್‌ಎಚ್‌ಎಂ ಅಡಿಯಲ್ಲಿ ಕಾರ್ಯನಿರ್ವಹಿಸುವವರು ಆಯುಷ್ ಸಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಸರ್ಕಾರದ ಸೂಚನೆ ಮೇರೆ ನಾವು ನೇಮಕ ಮಾಡಿಕೊಳ್ಳುತ್ತಿದ್ದೇವೆ. ರಾಮಚಂದ್ರ, ಆಯುಕ್ತರು, ಆಯುಷ್ ಇಲಾಖೆ