

ಹುಬ್ಬಳ್ಳಿ: ಆಟೋರಿಕ್ಷಾದಲ್ಲಿ ಬಿಟ್ಟು ಹೋಗಿದ್ದ 1.50 ಲಕ್ಷ ರೂ. ನಗದ ಸಹಿತ ಬ್ಯಾಗ್ ಅನ್ನು ಮಂಗಳವಾರ ಮಾಲೀಕರಿಗೆ ಮರಳಿಸುವ ಮೂಲಕ ಆಟೋರಿಕ್ಷಾ ಚಾಲಕರು ಮಾನವೀಯತೆ ಮೆರೆದಿದ್ದಾರೆ.
ಗಣೇಶ ಹೋಟೆಲ್ನಿಂದ ಗುಜರಾತ್ ಭವನ ಹಿಂದುಗಡೆ ಆಟೋರಿಕ್ಷಾ ಮೂಲಕ ಅಮಿತಾ ರಾಯ್ಕರ್ ಅವರು ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಆಟೋ ಚಾಲಕ ಅವರನ್ನು ಬಿಟ್ಟು ಬೇರೆ ಕಡೆ ತೆರಳಿದ್ದಾರೆ. ಆಗ ಅಮಿತಾ ಅವರು ತಮ್ಮ ಬ್ಯಾಗ್ ಮಿಸ್ ಆಗಿದೆ ಎಂದು ಉಪನಗರ ಠಾಣೆಗೆ ಆಗಮಿಸಿ ದೂರು ಕೊಟ್ಟಿದ್ದಾರೆ.
ನನ್ನ ತಂದೆಯನ್ನು ವಿವೇಕಾನಂದ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೆ. ಅಲ್ಲಿ ಕಟ್ಟಬೇಕಾಗಿದ್ದ ಹಣದ ಬ್ಯಾಗ್ ಮಿಸ್ ಆಗಿದೆ ಎಂದು ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪಿಎಸ್‌ಐ ಚನ್ನಬಸಪ್ಪ, ಪರಿಶೀಲನೆ ನಡೆಸಿದರು. ಆಟೋರಿಕ್ಷಾ ಚಾಲಕ ಇರುವ ಜಾಗ ಪತ್ತೆ ಮಾಡಿ ವಿಚಾರಿಸಿದ್ದಾರೆ. ಆದರೆ, ಆಟೋ ಚಾಲಕ ಸುನೀಲ್ ಕಾಂಬ್ಳೆ, ಮಹಿಳೆಯ ಮನೆಗೆ ಬ್ಯಾಗ್ ತಲುಪಿಸಿದ್ದೇನೆ ಎಂದಿದ್ದಾರೆ.
ಅಮಿತಾ ರಾಯ್ಕರ್ ಮನೆಗೆ ತೆರಳಿ ಬ್ಯಾಗ್ ಇರುವುದನ್ನು ಮನವರಿಕೆ ಮಾಡಿಕೊಂಡಿದ್ದು, ಪೊಲೀಸರು ಹಾಗೂ ಆಟೋರಿಕ್ಷಾ ಚಾಲಕರ ಮಾನವೀಯ ಗುಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.