

ಬೆಂಗಳೂರು: ಕೋರಮಂಗಲ ವ್ಯಾಪ್ತಿಯಲ್ಲಿ ನಿರ್ಮಿಸಿರುವ ದ್ವಿತೀಯ ಹಂತದ ಘನತ್ಯಾಜ್ಯ ವರ್ಗಾವಣೆ ಹಾಗೂ ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟಕದಿಂದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಕಾರ್ಯವನ್ನು ಪಾಲಿಕೆಯು ಯಶಸ್ವಿಯಾಗಿ ಕೈಗೊಂಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಯಲ್ಲಿ ಒಂದಷ್ಟು ಬದಲಾವಣೆ ತರಲಾಗುತ್ತಿದ್ದು, ನಗರದ ಸೌಂದರ್ಯವನ್ನು ಹೆಚ್ಚಿಸಿ ಬೆಂಗಳೂರನ್ನು ಸ್ವಚ್ಛ-ಸುಂದರ ನಗರವನ್ನಾಗಿಸಲು ಪಾಲಿಕೆ ಹಾಗೂ ಬಿಎಸ್‌ಡಬ್ಲ್ಯುಎಂಎಲ್ ವತಿಯಿಂದ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಈಜೀಪುರ ವಾರ್ಡ್‌ನಲ್ಲಿ ಮೊದಲ ದ್ವಿತೀಯ ಹಂತದ ಘನತ್ಯಾಜ್ಯ ವರ್ಗಾವಣೆ ಹಾಗೂ ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟಕ ಸ್ಥಾಪಿಸಲಾಗಿದೆ. ಕಳೆದ ಏಪ್ರಿಲ್ನಿಂದ ಈ ಘಟಕ ಕಾರ್ಯನಿರ್ವಹಿಸುತ್ತಿದ್ದು, ಬಿಟಿಎಂ ಲೇಔಟ್ ವಿಭಾಗ ಹಾಗೂ ಶಾಂತಿನಗರ ವಿಭಾಗದ ತಲಾ 3 ವಾರ್ಡ್‌ಗಳು ಮತ್ತು ಕೆ-100 ವ್ಯಾಲಿಯಿಂದ ಪ್ರತಿನಿತ್ಯ ಸುಮಾರು 150-160 ಮೆಟ್ರಿಕ್ ಟನ್ ಘನತ್ಯಾಜ್ಯ ಸ್ವೀಕರಿಸಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
7 ಹುಕ್ ಲೋಡರ್ ವಾಹನಗಳ ಬಳಕೆ:
ಪ್ರಸ್ತುತ ಘಟಕದಲ್ಲಿ 7 ಹುಕ್ ಲೋಡರ್ ವಾಹನಗಳು ಕಾರ್ಯನಿರ್ವಹಿಸುತ್ತಿದ್ದು, ಒಂದು ವಾಹನಕ್ಕೆ ಎರಡು ಕ್ಯಾಪ್ಸೂಲ್ ಮಾದರಿಯ ಕಂಟೈನರ್‌ಗಳಿವೆ. ವಾರ್ಡ್‌ಗಳಿಂದ ಸಂಗ್ರಹಣೆಯಾಗುವ ತ್ಯಾಜ್ಯವು ಆಟೋ ಟಿಪ್ಪರ್‌ಗಳಿಂದ ನೇರವಾಗಿ ಕ್ಯಾಫ್ಸೂಲ್‌ಗಳಿಗೆ ವರ್ಗಾವಣೆಯಾಗಲಿದ್ದು, ತ್ಯಾಜ್ಯವನ್ನು ಕಂಪ್ರೆಸ್ ಮಾಡಿ ಲಿಚೆಟ್ ದ್ರವತ್ಯಾಜ್ಯವನ್ನು ಪ್ರತ್ಯೇಕಿಸಿ, ಸುಮಾರು 16-18 ಟನ್ ತ್ಯಾಜ್ಯವನ್ನು ಪ್ರತಿಯೊಂದು ಕಂಟೈನರ್‌ನಲ್ಲಿ ವಿಲೇವಾರಿ ಮಾಡಬಹುದಾಗಿದೆ. ಸದರಿ ತ್ಯಾಜ್ಯದ ಪ್ರಮಾಣವು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಾಂಪ್ಯಾಕ್ಟರ್‌ಗಳು ವಿಲೇವಾರಿ ಮಾಡುವ ಪ್ರಮಾಣಕ್ಕಿಂತ 2ರಿಂದ 2.5 ಅಧಿಕವಾಗಿರುತ್ತದೆ. ಇದರಿಂದ ಕಾಂಪ್ಯಾಕ್ಟರ್ ವಾಹನಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
12 ಕೋಟಿ ರೂ. ನಿರ್ಮಾಣ ವೆಚ್ಚ:
ಒಂದು ದ್ವಿತೀಯ ಹಂತದ ಘನತ್ಯಾಜ್ಯ ವರ್ಗಾವಣೆ ಸ್ಥಾಪಿಸಲು ಜಿಎಸ್‌ಟಿ ಹೊರತುಪಡಿಸಿ ಅಂದಾಜು 12 ಕೋಟಿ ರೂ. ವೆಚ್ಚವಾಗಿದೆ. ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟಕ್ಕೆ ಜಿಎಸ್‌ಟಿ ಹೊರತುಪಡಿಸಿ 5.70 ಕೋಟಿ ರೂ. ವೆಚ್ಚವಾಗಿದೆ. ಈ ಘಟಕಗಳನ್ನು ಮೆ. ಪರಿಶುದ್ಧ ವೆಂಚರ್ಸ್ ಕಂಪನಿಯಿಂದ ಸ್ಥಾಪಿಸಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಪಾಲಿಕೆ ತಿಳಿಸಿದೆ.