ಆಟೋಚಾಲಕನ ಮೇಲೆ ಮಂಗಳಮುಖಿಯರಿಂದ ಹಲ್ಲೆ; ತಮ್ಮ ಅಡ್ಡೆ ಬಳಿ ಮೂತ್ರವಿಸರ್ಜಿಸಿದರು ಎಂಬ ಕಾರಣಕ್ಕೆ ಥಳಿತ

Kolar
ಹಲ್ಲೆಯಿಂದ ಪ್ರಕ್ಷುಬ್ಧಗೊಂಡ ಪರಿಸ್ಥಿತಿ ನಿಯಂತ್ರಿಸಿದ ಪೊಲೀಸರು
Published on

ಕೋಲಾರ: ತಮ್ಮ ಅಡ್ಡೆ ಬಳಿ ಮೂತ್ರ ವಿಸರ್ಜಿಸಿದರು ಎಂಬ ಕಾರಣಕ್ಕೆ ಮಂಗಳಮುಖಿಯರು 55 ವರ್ಷದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣ ವರದಿಯಾಗಿದೆ. ಆಟೋ ಚಾಲಕ ಅಮರನಾರಾಯಣ ಸ್ವಾಮಿ ಎಂಬವರು ಕೋಲಾರದ ಹೆದ್ದಾರಿ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಈ ಹಲ್ಲೆ ನಡೆದಿದೆ.

ಕೋಲಾರದ ಅರಾಭಿಕೊತ್ತನೂರು ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಇಂದು ಸಂಜೆ ಆಟೋಚಾಲಕ, ಚುಂಚೇದಹಳ್ಳಿ ನಿವಾಸಿ ಅಮರನಾರಾಯಣ ಸ್ವಾಮಿ ಮೂತ್ರ ವಿಸರ್ಜನೆ ಮಾಡಿದ್ದರು. ಅದು ನಮ್ಮ ಏರಿಯಾ ಎಂದು ತಗಾದೆ ತೆಗೆದ ಮಂಗಳಮುಖಿಯರು ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಆಟೋ ಮುಂಭಾಗದ ಗಾಜನ್ನೂ ಒಡೆದು ಹಾಕಿದ್ದಾರೆ.

ಮಂಗಳಮುಖಿಯರು ಹಲ್ಲೆ ನಡೆಸಿದ ವಿಷಯ ತಿಳಿಯುತ್ತಿದ್ದಂತೆ ಧಾವಿಸಿದ ಗ್ರಾಮಸ್ಥರು ಒಂಟಿ ಮನೆಯೊಳಗಿದ್ದ ಮೂವರು ಮಂಗಳಮುಖಿಯರತ್ತ ಮುನ್ನುಗ್ಗಿದ್ದಾರೆ. ಅವರ ಮೇಲೆ ಹಲ್ಲೆಗೆ ಮುಂದಾಗುತ್ತಿದ್ದಂತೆ ಇಬ್ಬರು ಮಂಗಳಮುಖಿಯರು ಓಡಿ ಪರಾರಿಯಾದರೆ, ಇನ್ನೊಬ್ಬರು ಮನೆಯೊಳಗೆ ಸೇರಿಕೊಂಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಕೋಲಾರ ಗ್ರಾಮಾಂತರ ಪೊಲೀಸರು ಕ್ರಮಕೈಗೊಂಡು ಪರಿಸ್ಥಿತಿ ತಿಳಿಯಾಗಿಸಿದ್ದಾರೆ.

ಹೆದ್ದಾರಿಯಲ್ಲಿ ಒಂಟಿಯಾಗಿ ಸಿಕ್ಕಿದವರ ಮೇಲೆ ಮಂಗಳಮುಖಿಯರು ಹಲ್ಲೆ-ಸುಲಿಗೆ ಹಾಗೂ ಶೋಷಣೆ ಮಾಡುವುದು ಹೆಚ್ಚಾಗುತ್ತಿದೆ ಎಂದು ಸ್ಥಳೀಯರು ಪೊಲೀಸರಿಗೆ ಇದೇ ವೇಳೆ ದೂರು ನೀಡಿದರು. ಅಲ್ಲದೆ ಅನಧಿಕೃತವಾಗಿ ಹೆದ್ದಾರಿ ಪಕ್ಕದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಮಂಗಳಮುಖಿ, ಮಸಾಜ್ ಸೆಂಟರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net