ಕಲ್ಲೂರೇಶ್ವರ, ರಾಮಲಿಂಗೇಶ್ವರ ಜಾತ್ರೆ

IMG_20250225_144539
ಹನಗೋಡು ಸಮೀಪವಿರುವ ಮಾದಳ್ಳಿಯ ಕೈಲಾಸ ಬೆಟ್ಟ ಹಾಗೂ ಕಲ್ಲೂರೇಶ್ವರ ದೇವಾಲಯ.
Published on

ಹನಗೋಡು: ಹನಗೋಡು ಸಮೀಪದ ಮಾದಳ್ಳಿಯ ಕೈಲಾಸ ಬೆಟ್ಟದಲ್ಲಿ ವಿರಾಜಮಾನವಾಗಿರುವ ಕಲ್ಲೂರೇಶ್ವರಸ್ವಾಮಿ ಹಾಗೂ ಕೊಳುವಿಗೆ ರಾಮಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ಫೆ.26ರಿಂದ ಆರಂಭವಾಗಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕಲ್ಲೂರೇಶ್ವರ ಬೆಟ್ಟದ ಮೇಲೆ ಎರಡು ಬೃಹತ್ ಬಂಡೆಗಳ ನಡುವೆ ಅನಾದಿ ಕಾಲದಲ್ಲೇ ಕಲ್ಲೂರೇಶ್ವರನ ಪ್ರತಿಮೆ, ನೂರೊಂದು ಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಬಂಡೆಯ ಗುಹೆಯಲ್ಲಿ ಶಿವಲಿಂಗ ಸ್ಥಾಪಿಸಲಾಗಿದ್ದು, ನಿತ್ಯ ಪೂಜೆ ನಡೆಯುತ್ತದೆ. ಪ್ರತಿ ಶಿವರಾತ್ರಿಯಂದು ಜಾಗರಣೆ, ಮಾರನೇ ದಿನ ಕೊಂಡೋತ್ಸವ ನಡೆಯಲಿದೆ. ಅಪಾರ ಸಂಖ್ಯೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸುತ್ತಾರೆ. ಫೆ.26ರ ಬುಧವಾರ ಬೆಳಗ್ಗೆ ಹೋಮ ಮತ್ತು ಮಹಾಮಂಗಳಾರತಿ, ಸಂಜೆ 6ಗಂಟೆಗೆ ದೇವರಿಗೆ ಎಣ್ಣೆ ಮಜ್ಜನ, 7ಕ್ಕೆ ವಿದ್ಯುತ್ ದೀಪಾಲಂಕಾರದೊಡನೆ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ, ರಾತ್ರಿ 10 ಗಂಟೆಗೆ ಖ್ಯಾತ ಗಾಯಕರಿಂದ ಮನರಂಜನ ಕಾರ್ಯಕ್ರಮದೊಂದಿಗೆ ಜಾಗರಣೆ ಆಯೋಜಿಸಲಾಗಿದೆ.

ಫೆ.27ರಂದು ಬೆಳಗ್ಗೆ 6ಗಂಟೆಗೆ ಹಾಲರವಿ ಸೇವೆ, 7 ಗಂಟೆಗೆ ಕೊಂಡೊತ್ಸವ, ನಂತರ ಪ್ರಸಾದ ಹಾಗೂ ಅನ್ನ ದಾಸೋಹ ನಡೆಯಲಿದೆ ಎಂದು ಜಾತ್ರಾ ಸಮಿತಿ ತಿಳಿಸಿದೆ. ಈಗಾಗಲೇ ಜಾತ್ರೋತ್ಸವಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ.

ಬೆಟ್ಟಕ್ಕೆ ಬರುವ ಮಾರ್ಗ: ಹುಣಸೂರಿನಿಂದ ನಾಗರಹೊಳೆ ರಸ್ತೆಯ ಹೊಸಪೆಂಜಳ್ಳಿ ಗೇಟ್ ಬಳಿಯಿಂದ ಹನಗೋಡಿಗೆ ಮಾರ್ಗದಲ್ಲಿ ಮಾದಳ್ಳಿ ಸಿಗಲಿದೆ. ಗ್ರಾಮ ಸಮೀಪವೇ ಸ್ವಾಮಿ ನೆಲಿಸಿರುವ ಕಲ್ಲೂರಪ್ಪನ ಗುಡ್ಡ ಸಿಗಲಿದೆ. ಹನಗೋಡು- ಕಿರಂಗೂರು ಮಾರ್ಗವಾಗಿಯೂ (5 ಕಿ.ಮೀ) ತಲುಪಬಹುದು.

ಕೊಳುವಿಗೆ ರಾಮಲಿಂಗೇಶ್ವರ ಜಾತ್ರೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಕೊಳುವಿಗೆ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ಫೆ.26ರಿಂದ ಮಾ 1ರವರೆಗೆ ನಾಲ್ಕು ದಿನ ಕಾಲ ವಿಜೃಂಭಣೆಯಿಂದ ಜರುಗಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿಯವರು ತಿಳಿಸಿದ್ದಾರೆ.

ಪಶ್ಚಿಮವಾಹಿನಿ ಲಕ್ಷ್ಮಣತೀರ್ಥ ನದಿಯ ದಂಡೆಯ ಮೇಲೆ ವಿರಾಜಮಾನವಾಗಿರುವ ಇತಿಹಾಸ ಪ್ರಸಿದ್ಧ ಚೋಳರ ಕಾಲದಲ್ಲಿ ನಿರ್ಮಾಣವಾಗಿರುವ ದೇವಾಲಯ ಶ್ರೀ ರಾಮಲಿಂಗೇಶ್ವರ ಸ್ವಾಮಿಗೆ ಫೆ.26ರ ಬುಧವಾರ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಹಾಗೂ ಜಾಗರಣೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು. ದೇಗುಲಕ್ಕೆ ವಿಶೇಷ ದೀಪಾಲಂಕಾರ ಮಾಡಲಾಗಿದೆ.

ಫೆ.27ರಂದು ಸ್ವಾಮಿಯ ಜಾತ್ರಾ ಮಹೋತ್ಸವ ಹಾಗೂ ಮಧ್ಯಾಹ್ನ ಅನ್ನದಾಸೋಹ ಹಮ್ಮಿಕೊಳ್ಳಲಾಗಿದೆ. ಫೆ.28ರಂದು ಗ್ರಾಮದ ಎಲ್ಲ ಬೀದಿಗಳಲ್ಲಿ ಸ್ವಾಮಿಯ ಪಲ್ಲಕ್ಕಿ ಉತ್ಸವ ಜರುಗಲಿದೆ. ಮಾ.1ರಂದು ಕೋಣನಹೊಸಹಳ್ಳಿ ಬಸವೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ದೇವರ ಮೆರವಣಿಗೆ ಸೇರಿದಂತೆ ಇತರ ಕಾರ್ಯಕ್ರಮಗಳು ನಡೆಯಲಿವೆ.

ಕಳೆದ ಎರಡು ವರ್ಷಗಳ ಹಿಂದಷ್ಟೇ ಈ ದೇವಾಲಯವನ್ನು ಕೊಳುವಿಗೆ ಗ್ರಾಮಸ್ಥರು ದಾನಿಗಳ ಸಹಕಾರದೊಂದಿಗೆ 25 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಿ ಲೋಕಾರ್ಪಣೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net