ಮಾನಸಿಕ, ದೈಹಿಕ ಆರೋಗ್ಯದ ಸ್ಥಿರತೆಗೆ ಸೇತುವೆ

HUN-JUNE-21(ANJANADRI YOGA KENDRA)
ಹುಣಸೂರು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆಯನ್ನು ಗಣ್ಯರು ಉದ್ಘಾಟಿಸಿದರು. ಬಿ.ಎಸ್. ಯೋಗಾನಂದಕುಮಾರ್, ವಿ.ಎನ್.ದಾಸ್, ಗಣೇಶ್ ಕುಮಾರಸ್ವಾಮಿ, ಮನೋಹರ್ ಇತರರಿದ್ದರು.
Published on

ಹುಣಸೂರು: ಯೋಗಭ್ಯಾಸ ಎನ್ನುವುದು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಅದ್ಭುತ ಕ್ರಮವಾಗಿದೆ ಎಂದು ತಾಲೂಕು ಹನುಮಂತೋತ್ಸವ ಸಮಿತಿ ಗೌರವಾಧ್ಯಕ್ಷ ಮತ್ತು ವಕೀಲ ಬಿ.ಎಸ್.ಯೋಗಾನಂದಕುಮಾರ್ ಅಭಿಪ್ರಾಯಪಟ್ಟರು.

ಅಂಜನಾದ್ರಿ ಯೋಗಕೇಂದ್ರದ ವತಿಯಿಂದ ಶನಿವಾರ ನಗರದ ಅಂಬೇಡ್ಕರ್ ಭವನದಲ್ಲಿ 11ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ಯೋಗ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

6 ಸಾವಿರ ವರ್ಷಗಳ ಹಿಂದೆ ನಮ್ಮ ಋಷಿಮುನಿಗಳು ಯೋಗವನ್ನು ವಿಶ್ವಕ್ಕೆ ಪರಿಚಯಿಸಿದರು. ಸನಾತನ ಧರ್ಮದ ವೇದ ಸಾಹಿತ್ಯ, ಪುರಾಣಗಳಲ್ಲಿ ಯೋಗದ ಮಹತ್ವವನ್ನು ಉಲ್ಲೇಖಿಸಲಾಗಿದೆ. ಯೋಗಾಭ್ಯಾಸ ಎಂದರೆ ಕೇವಲ ವ್ಯಾಯಾಮ, ಕಸರತ್ತು ಎನ್ನುವ ಮನೋಭಾವನೆಯನ್ನು ಬಿಡಬೇಕಿದೆ. ಯೋಗ ಎನ್ನುವುದು ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯದ ಸ್ಥಿರತೆಗೆ ಸೇತುವೆಯಾಗಿ ದುಡಿಯುತ್ತದೆ. ಮಾನಸಿಕ ಆರೋಗ್ಯದಿಂದ ದೈಹಿಕ ಸದೃಢತೆ ಗಳಿಸಲು ಸಾಧ್ಯ ಚಿಕ್ಕಮಕ್ಕಳಿಂದ ಆರಂಭಿಸಿ ವಯೋವೃದ್ಧರವರೆಗೂ ಯೋಗಾಭ್ಯಾಸ ಮಾಡಬಹುದಾಗಿದ್ದು, ಆಯಾ ವಯೋಮಾನಕ್ಕೆ ತಕ್ಕಂತೆ ಯೋಗಗುರುಗಳ ಮಾರ್ಗದರ್ಶನದೊಂದಿಗೆ ಯೋಗಾಭ್ಯಾಸ ನಡೆಸುವುದು ಸೂಕ್ತ. ಅಂಜನಾದ್ರಿ ಯೋಗಕೇಂದ್ರ 10 ವರ್ಷಗಳಿಂದ ಯೋಗ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಕಾರ್ಯವೆಂದರು.

ಅಂಜನಾದ್ರಿ ಯೋಗಕೇಂದ್ರದ ಅಧ್ಯಕ್ಷ ವಿ.ಎನ್.ದಾಸ್ ಮಾತನಾಡಿ, ಯೋಗಾಭ್ಯಾಸ ಕೇವಲ ಹವ್ಯಾಸವಾಗದೇ ದಿನನಿತ್ಯದ ಅವಿಭಾಜ್ಯ ಅಂಗವಾಗಬೇಕು. ಯೋಗಕ್ಕೆ ಯಾವುದೇ ಧರ್ಮ, ಜಾತಿ, ಮತ, ಪಂಥದ ಪರಿಧಿಯಿಲ್ಲ. ವಿಶ್ವದ 190 ದೇಶಗಳು ಇಂದು ಯೋಗ ಶಿಕ್ಷಣವನ್ನು ಒಪ್ಪಿಕೊಂಡಿವೆ ಎನ್ನುವುದಕ್ಕೆ ಇದಕ್ಕಿಂತ ಜ್ವಲಂತ ಉದಾಹರಣೆ ಬೇಕಿಲ್ಲ. ಯೋಗ ಈ ದೇಶದ ಅಸ್ಮಿತೆ. ಯೋಗ ಭಾರತ ದೇಶವು ವಿಶ್ವಕ್ಕೆ ನೀಡಿದ ಕೊಡುಗೆ. ಈ ಬಾರಿಯ ಘೋಷವಾಕ್ಯವಾದ ಒಂದು ಭೂಮಿ ಒಂದು ಆರೋಗ್ಯ ಎನ್ನುವಂತೆ ಆರೋಗ್ಯ ಸಮಾಜ ಸೃಷ್ಟಿಗೆ ಯುವಸಮಾಜ ಯೋಗಾಭ್ಯಾಸವನ್ನು ನಡೆಸುವುದು ಅಗತ್ಯವೆಂದರು.

ಯೋಗ ಶಿಕ್ಷಕರಾದ ಪ್ರಮೋದ್, ಸಹದೇವ, ಮುಕುಂದ್, ಮೇಘನಾ ಸರೋಜ, ಮನೋಹರ್ ಮುಂತಾದವರಿಂದ 100ಕ್ಕೂ ಹೆಚ್ಚು ಜನ ಸರಳ ವ್ಯಾಯಾಮದ ನಂತರ ವೃಕ್ಷಾಸನ, ತ್ರಿಕೋನಾಸನ, ಊರ್ಧ್ವಾಸನ, ಊರ್ಧ್ವಹಸ್ತಾಸನ, ಅರ್ಧ ಚಂದ್ರಾಸನ, ತಾಡಾಸನ, ಪಾದ ಹಸ್ತಾಸನ ಸೇರಿದಂತೆ 10ಕ್ಕೂ ಹೆಚ್ಚು ವಿವಿಧ ಆಸನಗಳನ್ನು ಪ್ರದರ್ಶಿಸಿದರು. ನಗರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಬಿಜೆಪಿ ಮುಖಂಡ ನಾರಾಯಣ್, ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಮೂರ್ತಿಜಿ ಇತರರು ಹಾಜರಿದ್ದರು.

ಯೋಗಾಭ್ಯಾಸದ ನಂತರ ಬೆಲ್ಲ, ಮೊಳಕೆಕಾಳು, ಸೌತೆಕಾಯಿ, ತೆಂಗಿನಕಾಯಿಯನ್ನೊಳಗೊಂಡ ಲಘುಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net