ಆಟೋ, ಟ್ಯಾಕ್ಸಿ ಚಾಲಕರ ಪ್ಯಾಕೇಜ್‌ಗೆ ಗ್ರಹಣ

auto
Published on

ಶ್ರವಣ್ ಕುಮಾರ್ ನಾಳ, ಪುತ್ತೂರು

ಕರೊನಾ ಲಾಕ್‌ಡೌನ್ ಸಂದರ್ಭ ತತ್ತರಿಸಿದ ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಶಕ್ತಿ ತುಂಬಲು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ 5 ಸಾವಿರ ರೂ. ಪರಿಹಾರಧನದ ವಿಶೇಷ ಪ್ಯಾಕೇಜ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶೇ.65ರಷ್ಟು ಫಲಾನುಭವಿಗಳಿಗೆ ಇನ್ನೂ ಸಿಕ್ಕಿಲ್ಲ.

ವಿಶೇಷ ಪ್ಯಾಕೇಜ್‌ಗೆ ಮೇ 16ರಂದು ಆದೇಶ ಹೊರಡಿಸಲಾಗಿತ್ತು. ದಾಖಲೆ ಸಮೇತ ಸೇವಾ ಸಿಂಧು ಆ್ಯಪ್ ಮೂಲಕ ಅರ್ಜಿ ಸಲ್ಲಿಸಿ ನಾಲ್ಕು ತಿಂಗಳು ಕಳೆದರೂ ಪರಿಹಾರ ಧನ ಬಹುತೇಕ ಚಾಲಕರ ಕೈಸೇರಿಲ್ಲ.

ಈ ಕುರಿತು ಸೇವಾ ಸಿಂಧು ಆ್ಯಪ್‌ನಲ್ಲಿರುವ ಟೋಲ್‌ಫ್ರೀ ನಂಬರ್‌ಗೆ (080 22230282, 080 22279954) ಕರೆ ಮಾಡಿ ವಿಚಾರಿಸಿದಾಗ, ನೀವು ಅಪ್ಲೋಡ್ ಮಾಡಿರುವ ದಾಖಲೆಯಲ್ಲಿ ವ್ಯತ್ಯಾಸವಾಗಿರಬಹುದು, ಸಾರಿಗೆ ಇಲಾಖೆ ಕಚೇರಿಯಲ್ಲಿ ವಿಚಾರಿಸಿ ಎಂದು ಉತ್ತರ ಬರುತ್ತಿದೆ. ಆರ್‌ಟಿಒ ಕಚೇರಿಗೆ ಹೋದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎನ್ನುವುದು ಚಾಲಕರ ಆರೋಪ.

ಚಾಲಕರು ಅರ್ಜಿ ಸಲ್ಲಿಸುವಾಗ ವಾಹನ ನೋಂದಣಿ ಸಂಖ್ಯೆ ನಮೂದಿಸಬೇಕಿದ್ದು, ಒಂದೇ ವಾಹನಕ್ಕೆ ಹಲವರು ಅರ್ಜಿ ಸಲ್ಲಿಸಿದಾಗ ಪರಿಹಾರ ಧನ ನೀಡುವುದಿಲ್ಲ. ದಾಖಲೆಗಳು ಅಸ್ಪಷ್ಟವಾಗಿರುವುದು, ಅಪೂರ್ಣವಾಗಿರುವುದು ಮತ್ತಿತರ ಕಾರಣಗಳಿಂದಲೂ ಪ್ರಕ್ರಿಯೆ ವಿಳಂಬವಾಗುತ್ತದೆ ಎನ್ನುತ್ತಾರೆ ಆರ್‌ಟಿಒ ಅಧಿಕಾರಿಗಳು.

ಪರಿಹಾರ ಧನ ವಿತರಣೆ ಕುರಿತೂ ಗೊಂದಲ ಇದೆ. ನಾವು ದಾಖಲೆಗಳನ್ನು ಒದಗಿಸುತ್ತೇವೆ, ಯೋಜನೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬುವುದು ಆರ್‌ಟಿಒ ಅಧಿಕಾರಿಗಳ ಉತ್ತರವಾದರೆ, ಈ ಯೋಜನೆ ಆರ್‌ಟಿಒ ಮೂಲಕವೇ ಜಾರಿಯಾಗುತ್ತಿದೆ ಎನ್ನುತ್ತದೆ ಜಿಲ್ಲಾಡಳಿತ.

ಜಿಲ್ಲೆ                         ದಕ್ಷಿಣ ಕನ್ನಡ                ಉಡುಪಿ

ವಾಹನ                  ಆಟೋ     ಟ್ಯಾಕ್ಸಿ        ಆಟೋ     ಟ್ಯಾಕ್ಸಿ

ಅರ್ಜಿ ಸಲ್ಲಿಸಿದವರು      8,000   5,000      6,300    3,800

ಪರಿಹಾರ ಪಡೆದವರು    1,600   1,300       2,100   3,210

ಪರಿಹಾರ ಸಿಗದವರು     6,400   3,700      4,200    590

ಸೌಲಭ್ಯ ವಂಚಿತರು: ಬ್ಯಾಡ್ಜ್ ಹೊಂದಿರುವ ಆಟೋ ಚಾಲಕರು ಮಾತ್ರ ಈ ಸಹಾಯಧನ ಪಡೆಯಲು ಅರ್ಹರು ಎಂದು ಸರ್ಕಾರ ಮೊದಲು ಹೇಳಿತ್ತು. ಚಾಲಕರಿಂದ ಆಕ್ಷೇಪ ಬಂದ ಬಳಿಕ ಈ ಷರತ್ತನ್ನು ಕೈಬಿಡಲಾಯಿತು. ಸೇವಾಸಿಂಧು ಪೋರ್ಟಲ್ ಮುಖೇನ ಅರ್ಜಿ ಸಲ್ಲಿಸಲು ಮೇ 22ರಿಂದ ಜುಲೈ 31ರವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ ಗ್ರಾಮೀಣ ಭಾಗದ ಚಾಲಕರಿಗೆ ಸೂಕ್ತ ಮಾಹಿತಿ ಸಿಗದಿರುವುದು, ತಾಂತ್ರಿಕ ಅಡಚಣೆ, ಕೇವಲ ಎರಡು ತಿಂಗಳು ಅವಧಿ ನೀಡಿರುವುದರಿಂದ ಹಲವರಿಗೆ ಅರ್ಜಿ ಸಲ್ಲಿಸುವುದು ಸಾಧ್ಯವಾಗಿಲ್ಲ.

ಅರ್ಜಿ ಸಲ್ಲಿಕೆ ನಂತರ ಪರಿಶೀಲನೆಗಾಗಿ ಸಹಾಯವಾಣಿಗೆ ಕರೆ ಮಾಡಿದರೆ ಬ್ಯುಸಿ ಬರುತ್ತಿತ್ತು. ನಾಗರಿಕ ಸೇವೆಗಳ ಇಲೆಕ್ಟ್ರಾನಿಕ್ ವಿತರಣಾ ನಿರ್ದೇಶನಾಲಯಕ್ಕೆ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಅರ್ಜಿ ಸಲ್ಲಿಸಿ ನಾಲ್ಕು ತಿಂಗಳು ಕಳೆದರೂ ಪರಿಹಾರಧನ ಸಿಕ್ಕಿಲ್ಲ.

- ರಮೇಶ್ ಮಂಗಳೂರು, ಟ್ಯಾಕ್ಸಿ ಚಾಲಕ

ಸರ್ಕಾರ ಘೋಷಿಸಿದ್ದ ವಿಶೇಷ ಪ್ಯಾಕೇಜ್ ಸಂಪೂರ್ಣ ಆನ್‌ಲೈನ್ ಸೇವಾ ಸಿಂಧುವಿನಡಿ ಅರ್ಜಿ ಸಲ್ಲಿಸುವಂಥದ್ದು. ಚಾಲಕರಿಗೆ ದಾಖಲೆಗಳ ಲೋಪವಿದ್ದಲ್ಲಿ ಕಾನೂನಾತ್ಮಕವಾಗಿ ಸರಿಪಡಿಸಿಕೊಡುತ್ತಿದ್ದೇವೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

- ಆನಂದ ಗೌಡ, ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net