ಮೈಸೂರು: ಆಟೋ ರಿಕ್ಷಾ ಚಾಲನಾ ತರಬೇತಿ ಪಡೆದ ಮಹಿಳೆಯರು

Auto Rickshaw Driving Trained Women in Mysore
Published on

ಮೈಸೂರು: ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಆಟೋ ರಿಕ್ಷಾ ಚಾಲನಾ ತರಬೇತಿ ಒದಗಿಸುವ ‘ಸ್ವಾವಲಂಬಿ ಸ್ತ್ರೀ’ ಯೋಜನೆಯಡಿ 11 ಮಹಿಳೆಯರು ಯಶಸ್ವಿಯಾಗಿ ಆಟೋ ರಿಕ್ಷಾ ಚಾಲನಾ ತರಬೇತಿ ಪೂರೈಸಿದ್ದಾರೆ.

ತಳಿರು ಫೌಂಡೇಷನ್, ರೋಟರಿ ಮೈಸೂರು ಮತ್ತು ರೋಟರಿ ಮೈಸೂರು ಈಸ್ಟ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಎನ್‌ಆರ್ ಫೌಂಡೇಶನ್ ವತಿಯಿಂದ ಆಟೋ ರಿಕ್ಷಾ ಚಾಲನೆ ತರಬೇತಿ ಆಯೋಜಿಸಲಾಗಿತ್ತು. ಈ ಯೋಜನೆಯಡಿ ಆಟೋ ರಿಕ್ಷಾ ಚಾಲನೆ ತರಬೇತಿ ಜತೆಗೆ ಆರ್ಥಿಕ ಸಾಕ್ಷರತೆ, ಆತ್ಮರಕ್ಷಣೆ, ಸಂವಹನ ಕೌಶಲ ಮತ್ತು ಸಮಾಲೋಚನೆ ಸೇರಿದಂತೆ ಅಗತ್ಯ ಜೀವನ ಕೌಶಲಗಳ ತರಬೇತಿ ನೀಡಲಾ ಯಿತು. ಈ ಮಹಿಳೆಯರು ಆರ್‌ಟಿಒ ಪರವಾನಗಿ, ಬ್ಯಾಡ್ಜ್ ಮತ್ತು ಸಮವಸ್ತ್ರ ಪಡೆದರು. ಈಗಾಗಲೇ ಎರಡನೇ ಬ್ಯಾಚ್ ಸಿದ್ಧವಾಗಿದ್ದು, ಈ ಬ್ಯಾಚ್‌ನಲ್ಲಿ 12 ಮಹಿಳೆಯರು ತರಬೇತಿ ಪಡೆಯಲಿದ್ದಾರೆ.

ಮೊದಲ ಬ್ಯಾಚ್‌ನ ತರಬೇತಿ ಯಶಸ್ವಿಯಾಗಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪಡುವಾರಹಳ್ಳಿಯ ವಾಲ್ಮೀಕಿ ರಸ್ತೆಯ ಎನ್‌ಆರ್ ಸಮುದಾಯ ಅಭಿವೃದ್ಧಿ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಎನ್‌ಆರ್ ಫೌಂಡೇಶನ್ ಅಧ್ಯಕ್ಷ ಆರ್. ಗುರು ಮೊದಲ ಬ್ಯಾಚ್ ನ ಮಹಿಳೆಯರ ಚಾಲನಾ ಕಾರ್ಯಾರಂಭಕ್ಕೆ ಚಾಲನೆ ನೀಡಿದರು.

ಶಿಕ್ಷಣದ ಕೊರತೆ, ಚಿಕ್ಕ ವಯಸ್ಸಿನಲ್ಲಿಯೇ ವಿವಾಹ, ಜೀವನಕೌಶಲಗಳ ಕೊರತೆಯಿಂದ ಕಷ್ಟ ಪಡುತ್ತಿದ್ದ, ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಉತ್ತಮ ಜೀವನ ಕಲ್ಪಿಸುವ ಮಹತ್ತರ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಈ ಯೋಜನೆ ಮೂಲಕ 11 ಮಂದಿ ಮಹಿಳೆಯರು ಸ್ವತಂತ್ರವಾಗಿ ಜೀವನ ಸಾಗಿಸುವ ಸಾಮರ್ಥ್ಯ ಗಳಿಸಿಕೊಂಡಿದ್ದಾರೆ.

ಎನ್‌ಆರ್ ಫೌಂಡೇಶನ್ ಅಧ್ಯಕ್ಷ ಆರ್. ಗುರು ಮಾತನಾಡಿ, ಮಹಿಳೆಯರನ್ನು ಸಬಲೀಕರಣಗೊಳಿಸುವುದು ಎಂದರೆ ಜೀವನ ಕೌಶಲ ಕಲಿಸುವುದಷ್ಟೇ ಅಲ್ಲ, ಅವರ ಸಾಮರ್ಥ್ಯ ಹೆಚ್ಚಿಸುವುದು ಮತ್ತು ಬದುಕನ್ನು ಬದಲಿಸುವುದು. ಸ್ವಾವಲಂಬಿ ಸ್ತ್ರೀ ಯೋಜನೆ ಮೂಲಕ ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಸ್ವತಂತ್ರವಾಗಿ ಬದುಕುವಂತೆ ಮಾಡಿರುವುದು ನಮಗೆ ಸಂತೋಷ ಕೊಟ್ಟಿದೆ ಎಂದು ಹೇಳಿದರು.

ತರಬೇತಿ ಪಡೆದ ರೇಖಾ ಮಾತನಾಡಿ, ನನ್ನೂರು ಪಾಂಡವಪುರ, ಮೂರು ಹೆಣ್ಣು ಮಕ್ಕಳಿದ್ದಾರೆ. ಪತಿ ತೀರಿಕೊಂಡಿದ್ದಾರೆ. ವಯಸ್ಸಾದ ತಾಯಿ ನನ್ನ ಜತೆಗೆ ಇದ್ದಾರೆ. ನಾನು ಓದಿದ್ದು 5ನೇ ಕ್ಲಾಸು, ಹಣ ಸಂಪಾದನೆಗೆ ಬಹಳ ಕಷ್ಟ ಪಡುತ್ತಿದ್ದೆ. ಬಂಧು ಬಳಗ ದೂರ ಇಟ್ಟಿದ್ದಾರೆ. ಈ ಹೊತ್ತಲ್ಲಿ ಸ್ವಾವಲಂಬಿ ಸ್ತ್ರೀ ಕಾರ್ಯಕ್ರಮದ ಕುರಿತು ತಿಳಿದು ಭಾಗವಹಿಸಿದೆ. ಈಗ ನಾನು ತುಂಬು ವಿಶ್ವಾಸದಿಂದ ಆಟೋ ಓಡಿಸಬಲ್ಲೆ. ಇಲ್ಲಿ ದೊರೆತ್ತಿರುವ ಜೀವನ ಕೌಶಲಗಳಿಂದ ಭಯ ಹೋಗಿ, ಧೈರ್ಯ ಬಂದಿದೆ ಎಂದು ಹೇಳಿದರು.

ತರಬೇತಿ ಪಡೆದ ಮಾನಸ ಮಾತನಾಡಿ, ಅನಿವಾರ್ಯ ಕಾರಣಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಾಗಲಿಲ್ಲ. ಮೊದಲು ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದೆ. ನಂತರ ಸ್ವಿಗ್ಗಿ ಡೆಲಿವರಿ ಆರಂಭಿಸಿದೆ. ನಾನು ಮದುವೆಯಾಗಿಲ್ಲ, ಏಕಾಂಗಿಯಾಗಿ ಉಳಿಯುವ ನಿರ್ಧಾರ ಮಾಡಿದ್ದೇನೆ. ನಾನು ಹಲವು ಆಟೋಗಳ ಮಾಲಕಿಯಾಗಿ, ನನ್ನಂತಹ ಅನೇಕ ಮಹಿಳೆಯರಿಗೆ ಚಾಲನೆ ಅವಕಾಶ ಒದಗಿಸುವ ಆಸೆ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.

ತಳಿರು ಪ್ರತಿಷ್ಠಾನದ ಸಂಸ್ಥಾಪಕಿ ಡಾ.ಎ.ಆರ್.ಚಿತ್ರಾ ಮಾತನಾಡಿ, ಮಹಿಳೆಯರಿಗೆ ಕೌಶಲ ತರಬೇತಿ ನೀಡಿ ಅವರಿಗೆ ಶಕ್ತಿ ತುಂಬುವ ನಮ್ಮ ಉದ್ದೇಶಕ್ಕೆ ಪೂರಕವಾಗಿ ಈ ಯೋಜನೆ ಆಯೋಜನೆಗೊಂಡಿದೆ. ಸ್ವಾವಲಂಬಿ ಸ್ತ್ರೀ ಯೋಜನೆಯು ಭರವಸೆ ತುಂಬುವ ಕಾರ್ಯಕ್ರಮವಾಗಿದ್ದು, ಸೂಕ್ತ ಬೆಂಬಲ ಮತ್ತು ತರಬೇತಿ ಸಿಕ್ಕರೆ ಮಹಿಳೆಯರು ಎಲ್ಲ ಸವಾಲುಗಳನ್ನು ಸೋಲಿಸಿ ಅವರ ಭವಿಷ್ಯವನ್ನು ರೂಪಿಸಿಕೊಳ್ಳಬಲ್ಲರು ಎಂಬುದಕ್ಕೆ ಪುರಾವೆಯಾಗಿದೆ ಎಂದು ಹೇಳಿದರು.

ರೋಟರಿ ಮೈಸೂರು ಅಧ್ಯಕ್ಷ ಎನ್.ಪ್ರವೀಣ್ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಹಲವು ಮಹಿಳೆಯರು ಇಂದು ಹೊಸ ಪ್ರಯಾಣ ಆರಂಭಿಸುತ್ತಿದ್ದಾರೆ. ಸ್ವಾವಲಂಬಿ ಸ್ತ್ರೀ ಆಟೋ ರಿಕ್ಷಾ ಚಾಲನೆ ತರಬೇತಿ ಕಾರ್ಯಕ್ರಮವು ನಾವು ಜತೆ ಸೇರಿ ದುಡಿದಾಗ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು. ರೋಟರಿ ಮೈಸೂರು ಈಸ್ಟ್‌ನ ರೋಹಿತ್ ಸುಬ್ಬಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net