ಸದಸ್ಯತ್ವ ಇದ್ದರೆ ಮಾತ್ರ ಆಟೋ ಚಾಲನೆಗೆ ಅವಕಾಶ!

WhatsApp Image 2023-08-24 at 4.46.07 PM
Published on

ಮಡಿಕೇರಿ: ನಗರದ ಆಟೋ ಚಾಲಕ ಮಾಲೀಕರ ಸಂಘ ಮತ್ತು ಕೊಡಗು ರಕ್ಷಣ ವೇದಿಕೆ ಆಟೋ ಘಟಕದಲ್ಲಿ ಆಟೋ ಚಾಲಕರು ಸದಸ್ಯತ್ವ ಪಡೆದುಕೊಂಡಲ್ಲಿ ಮಾತ್ರ ನಗರದಲ್ಲಿ ಸಂಚಾರಕ್ಕೆ ಅವಕಾಶ ಎಂದು ಸಂಘದ ಜಿಲ್ಲಾಧ್ಯಕ್ಷ ಡಿ.ಎಚ್.ಮೇದಪ್ಪ ಎಚ್ಚರಿಸಿದರು.


ಇತ್ತೀಚೆಗೆ ನಗರದಲ್ಲಿ ಅಹಿತಕರ ಘಟನೆಗಳು ಹೆಚ್ಚಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ನಗರದ ಆಟೋ ಚಾಲಕ ಮಾಲೀಕರ ಸಂಘ ಮತ್ತು ಕೊಡಗು ರಕ್ಷಣ ವೇದಿಕೆ ಆಟೋ ಘಟಕದಲ್ಲಿ ಚಾಲಕರು ತಮ್ಮ ಸದಸ್ಯತ್ವ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.


ನಗರದಲ್ಲಿ ಅಟೋ ಚಾಲಕರು ಸಂಘದಲ್ಲಿ ಸದಸ್ಯತ್ವ ಹೊಂದದೇ ಕರ್ತವ್ಯ ನಿರತರಾಗಿದ್ದಾರೆ. ಈ ಗುಂಪಿಗೆ ಸೇರಿದ ಚಾಲಕನೋರ್ವ ಇತ್ತೀಚೆಗೆ ವೈದ್ಯಕೀಯ ಕಾಲೇಜಿನಲ್ಲಿ ಮಹಿಳೆಯರ ಹಾಸ್ಟೆಲ್ ಬಳಿ ಅಸಭ್ಯವಾಗಿ ವರ್ತಿಸಿ ಬಂಧಿತನಾಗಿದ್ದಾನೆ. ಈತ ನಮ್ಮ ಸಂಘದಲ್ಲಿ ಸದಸ್ಯ ಕೂಡ ಆಗಿಲ್ಲ. ಆದರೆ, ಚಾಲಕ ವೃತ್ತಿಯನ್ನು ಅಳವಡಿಸಿಕೊಂಡ ನಮಗೆ ಕೆಟ್ಟ ಹೆಸರು ಬರುತ್ತಿದೆ. ಪರಿಣಾಮ ಸದಸ್ಯತ್ವ ಕಡ್ಡಾಯ ಮಾಡಿದ್ದೇವೆ. ಅಷ್ಟೇ ಅಲ್ಲದೇ, ಚಾಲಕರ ಕೆಟ್ಟ ನಡವಳಿಕೆಗಳು ಕಂಡುಬಂದಲ್ಲಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದಲ್ಲಿ ಸಂಘದ ಗಮನಕ್ಕೆ ತರಬಹುದು. ಜತೆಗೆ ಆಟೋ ಚಾಲಕನ ಹಿಂಬದಿ ಸೀಟ್‌ನಲ್ಲಿ ಆಟೋ ನಂಬರ್ ಹಾಕುವ ಕ್ರಮಕ್ಕೆ ಮುಂದಾಗಿದ್ದೇವೆ. ಪ್ರಯಾಣಿಕರು ತಿಳಿಸಿದರೆ ಅಂತಹ ಚಾಲಕನನ್ನು ಸಂಘದಿಂದ ಹೊರಗಿಟ್ಟು ಆರ್‌ಟಿಒ ಇಲಾಖೆ ಮೂಲಕ ಲೈಸೆನ್ಸ್‌ನ್ನು ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net