

ಚಿಕ್ಕಬಳ್ಳಾಪುರ: ಮಂಚೇನಹಳ್ಳಿ ಪೊಲೀಸ್ ಠಾಣೆಯ ನಾಮಗೊಂಡ್ಲು ಗ್ರಾಮದ ಸೇತುವೆಯ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆಯ ಪ್ರಕರಣವನ್ನು ಖಾಕಿ ಪಡೆ ಭೇದಿಸಿದ್ದು ಕೊಲೆಗೆ ಇವಿಎಂ ಹಣವನ್ನು ಪಾವತಿಸಲು ಆರ್ಥಿಕ ಸಮಸ್ಯೆ ಉಂಟಾದಾಗ ಪರಿಹಾರಕ್ಕೆ ಗೆಳೆಯನೇ ಇತರ ಇಬ್ಬರು ಸ್ನೇಹಿತರೊಂದಿಗೆ ಸೇರಿಕೊಂಡು ಕೊಲೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ.
ಗೌರಿಬಿದನೂರಿನ ವಿರೂಪಸಂದ್ರದ ನಿವಾಸಿ, ಬೆಂಗಳೂರಿನ ಆಟೋ ಚಾಲಕ ರಾಕೇಶ್ (೩೮), ಅಂಜಲಿ (೩೪), ನವೀನ್ ಹಾಗೂ ನಿಹಾರಿಕಾ ಆರೋಪಿಗಳು. ಕೊಲೆಯಾದ ಮಹಿಳೆಯು ಆಂಧ್ರದ ಹಿಂದೂಪುರದ ಅರ್ಚನಾ. ಗೌರಿಬಿದನೂರು ಸಿಪಿಐ ಸತ್ಯನಾರಾಯಣ್ ನೇತೃತ್ವದ ಪೊಲೀಸ್ ತಂಡವು ಆರೋಪಿ ರಾಕೇಶ್ ಮೃತಳಿಗೆ ಹಲವು ಬಾರಿ ಮೊಬೈಲ್ ಕರೆ ಮಾಡಿರುವ ಮಾಹಿತಿಯನ್ನಾಧಾರಿಸಿ ಪ್ರಕರಣವನ್ನು ಭೇದಿಸಿದ್ದು ಈತನನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದಾಗ ಸತ್ಯಾಂಶವು ಹೊರ ಬಿದ್ದಿದೆ. ಅಂಜಲಿಯನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಾದ ನವೀನ್ ಹಾಗೂ ನಿಹಾರಿಕಾ ಬಂಧನಕ್ಕೆ ಬಲೆ ಬೀಸಲಾಗಿದೆ.
*ಇಎಂಎ ಸಾಲಕ್ಕೆ ಹುನ್ನಾರ
ಆಟೋ ಚಾಲಕ ರಾಕೇಶ್ ವಾಹನ ಖರೀದಿಸಲು ಸಾಲವನ್ನು ಪಡೆದುಕೊಂಡಿದ್ದ. ಹಾಗೆಯೇ ದ್ವಿಚಕ್ರ ವಾಹನವನ್ನು ಅಡವಿಟ್ಟಿದ್ದ. ಇದರ ನಡುವೆ ಇಎಂಐ ಕಂತಿನ ಹಣ ಹಾಗೂ ಇತರೆ ಸಾಲವನ್ನು ತೀರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹಣ ಹೊಂದಾಣಿಕೆಗೆ ಈ ದುಷ್ಕತ್ಯವೆಸಗಿದ್ದಾನೆ. ಅಂಜಲಿ, ನವೀನ್ ಜತೆ ಅರ್ಚನಾಳನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಮಾಂಗಲ್ಯಸರ ಹಾಗೂ ಬಂಗಾರದ ಕಿವಿಯ ಒಲೆಯನ್ನ ಫೈನಾನ್ಸ್ ಒಂದರಲ್ಲಿ 2.19 ಲಕ್ಷ ರೂ.ಗೆ ಅಡಮಾನ ಇಟ್ಟಿದ್ದು ಇದರ ಹಣದಲ್ಲಿ ಆಟೋ ಇಎಂಐ ಹಾಗೂ ಕೈ ಸಾಲ ತೀರಿಸಿ, ಉಳಿದಿದ್ದರಲ್ಲಿ ಆರೋಪಿಗಳು ಮೋಜು ಮಸ್ತಿ ಮಾಡಿಕೊಂಡಿದ್ದರು.
*ಪ್ಲಾನ್ ಹೇಳಿದ್ದ ಗೆಳತಿ
ಸಾಲವನ್ನು ತೀರಿಸಲು ಅರ್ಚನಾಳನ್ನು ಕೊಲೆ ಮಾಡಿ, ಒಡವೆಗಳನ್ನು ಕದಿಯಲು ರಾಕೇಶ್ ಸ್ಹೇಹಿತೆ ನಿಹಾರಿಕಳೇ ಪ್ಲಾನ್ ಹೇಳಿದ್ದು ತಂಡದ ರಾಕೇಶ್, ತಾನು ಬರಲು ಆಗದೇ ನವೀನ್ ಜತೆಗೆ ಪ್ರಾಣ ಸ್ನೇಹಿತೆ ಅಂಜಲಿಯನ್ನು ಕಳುಹಿಸಿದ್ದಾಳೆ. ಈಕೆಯ ಸಲಹೆಯಂತೆ ಕಾರಿನಲ್ಲಿ ಅರ್ಚನಾಳ ಕತ್ತು ಹಿಸುಕಿ ಕೊಲೆ ಮಾಡಿ, ಆರೋಪಿಗಳು ಪರಾರಿಯಾಗಿದ್ದರು