

ಕಾಸರಗೋಡು: ಕನ್ಯಪ್ಪಾಡಿ ಕರ್ಕಡಪಳ್ಳ ನಿವಾಸಿ ಶ್ರೀಧರ ಎಂಬುವರ ಪುತ್ರ, ಬದಿಯಡ್ಕದಲ್ಲಿ ಆಟೋರಿಕ್ಷಾ ಚಾಲಕರಾಗಿರುವ ನಿತಿನ್ ಕುಮಾರ್(29)ನಿಗೂಢವಾಗಿ ನಾಪತ್ತೆಯಾಗಿದ್ದು, ಈ ಬಗ್ಗೆ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಬದಿಯಡ್ಕದ ತನ್ನ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದ ಅವರು ಬದಿಯಡ್ಕ ಮೇಲಿನ ಪೇಟೆಯಲ್ಲಿ ಆಟೋರಿಕ್ಷಾ ಬಾಡಿಗೆ ನಡೆಸುತ್ತಿದ್ದರು. ಗುರುವಾರ ಬೆಳಗ್ಗೆ ಎಂದಿನಂತೆ ಮನೆಯಿಂದ ಆಟೋರಿಕ್ಷಾದೊಂದಿಗೆ ತೆರಳಿದ್ದ ಅವರು, ವಾಪಸಾಗಿರಲಿಲ್ಲ. ಅವರ ಮೊಬೈಲ್ ಸ್ವಿಚ್‌ಆಫ್ ಆದ ಸ್ಥಿತಿಯಲ್ಲಿದೆ.
ಬದಿಯಡ್ಕದ ಸಮುದಾಯ ಆರೋಗ್ಯ ಕೇಂದ್ರದ ಸಮೀಪದ ವ್ಯಕ್ತಿಯೊಬ್ಬರ ಮನೆ ಬಳಿ ಆಟೋರಿಕ್ಷಾ ಪತ್ತೆಯಾಗಿದೆ. ಸಂಬಂಧಿ ಭಾಸ್ಕರ ಎಂಬುವರ ದೂರಿನ ಮೇರೆಗೆ ಕೇಸು ದಾಖಲಾಗಿದೆ.