ಸರಗಳ್ಳನನ್ನು ಬೆನ್ನಟ್ಟಿ ಹೋಗಿ ಹಿಡಿದ ಆಟೋ ಡ್ರೈವರ್

autodriver
Published on

ಬೆಂಗಳೂರು: ನಗರದಲ್ಲಿ ಒಂಟಿ ಮಹಿಳೆಯ ಸರ ಕದ್ದು ಓಡಿಹೋಗುತ್ತಿದ್ದ ಖದೀಮನೊಬ್ಬ, ಆಟೋ ಚಾಲಕನ ಸಮಯಪ್ರಜ್ಞೆಯಿಂದ ರೆಡ್​ ಹ್ಯಾಂಡೆಡ್​ ಆಗಿ ಸಿಕ್ಕಿಬಿದ್ದಿದ್ದಾನೆ. ಹೀಗೆ ಕಳ್ಳನ ಬೆನ್ನಟ್ಟಿ ಹೋಗಿ ಹಿಡಿದ ಆಟೋ ಡ್ರೈವರ್​ ರುದ್ರೇಶ್​ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಸರಗಳ್ಳನಾದ 24 ವರ್ಷದ ಕೇಶವ್​ನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಬಾಣಾವರದಲ್ಲಿ ಇಂದು ಈ ಘಟನೆ ನಡೆದಿದೆ. ಸರಗಳ್ಳ ಕೇಶವ್​, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯ ಕತ್ತಿನಿಂದ ಸರ ಕಸಿದು ಎಸ್ಕೇಪ್ ಆಗುತ್ತಿದ್ದ. ಇದನ್ನು ಗಮನಿಸಿದ ಆಟೋ ಡ್ರೈವರ್​ ರುದ್ರೇಶ್​, ಆರೋಪಿಯನ್ನು ಎರಡು ಕಿಲೋಮೀಟರ್ ಚೇಸ್ ಮಾಡಿ ಹಿಡಿದಿದ್ದಾರೆ. ಕಳ್ಳನನ್ನು ವಶಕ್ಕೆ ಪಡೆದ ಪೊಲೀಸರು, 40 ಸಾವಿರ ರೂಪಾಯಿ ಮೌಲ್ಯದ 9.5 ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.

ಆಟೋ ಡ್ರೈವರ್ ರುದ್ರೇಶ್ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೂಕ್ತ ಬಹುಮಾನ ನೀಡುವಂತೆ ಉತ್ತರ ವಿಭಾಗದ ಡಿಸಿಪಿಗೆ ಸೂಚನೆ ನೀಡಿದ್ದಾರೆ.

ಖರ್ಚಿಗಾಗಿ ಕಳ್ಳತನ: ಪಿಯುಸಿ ವ್ಯಾಸಂಗ ಮಾಡಿ ಸೆಕ್ಸಸ್ ಹೆಲ್ತ್ ಕೇರ್​​ನಲ್ಲಿ ಹೋಮ್ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದ ಆರೋಪಿ ಕೇಶವ್​, ಕಳೆದ ಒಂದು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ. ಖರ್ಚಿಗೆ ಹಣವಿಲ್ಲದೆ ಸುಲಭವಾಗಿ ಹಣ ಗಳಿಸಲು ಕಳ್ಳತನದ ದಾರಿ ಹಿಡಿದಿದ್ದ. ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net