

ಶಿವಮೊಗ್ಗ: ಗೋಪಾಲಗೌಡ ಬಡಾವಣೆಯ ಸಿ ಬ್ಲಾಕ್‌ನಲ್ಲಿ ಪರಿಚಯಸ್ಥರ ವೈದ್ಯರೊಬ್ಬರ ಮನೆಗೆ ಹಾಡುಹಗಲೇ ನುಗ್ಗಿ 22.74 ಲಕ್ಷ ರೂ. ನಗದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಆಟೋ ಚಾಲಕನನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗೋಪಾಳದ ವಿಶ್ವೇಶ್ವರನಗರದ ಅಶ್ರಫ್‌ವುಲ್ಲಾ(35) ಬಂಧಿತ ಆಟೋ ಚಾಲಕ. ಸೆ.17ರಂದು ಪತಿಯ ಅನಾರೋಗ್ಯ ನಿಮಿತ್ತ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾಗ ಕಳ್ಳತನ ಮಾಡಿದ್ದ. ವೈದ್ಯೆಯ ಪತಿ ಅನಾರೋಗ್ಯ ಪೀಡಿತರಾಗಿದ್ದು ಆಗಾಗ್ಗೆ ಮನೆಗೆ ಬಂದು ಆಶ್ರಫ್‌ವುಲ್ಲಾ ಅವರನ್ನು ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದು, ವಾಪಸ್ ಕರೆದುಕೊಂಡು ಬಂದು ಬಿಡುತ್ತಿದ್ದ.
ಹಾಗಾಗಿ ವೈದ್ಯರ ಮನೆಯವರಿಗೆ ಆಶ್ರಫ್‌ವುಲ್ಲಾ ಪರಿಚಯಸ್ಥನೇ ಆಗಿದ್ದ. ಸೆ.17ರಂದು ವೈದ್ಯೆ ಮತ್ತು ಅವರ ಪತಿ ಹೊರಗಡೆ ಹೋಗುವುದನ್ನು ಕೇಳಿಸಿಕೊಂಡಿದ್ದ. ಆನಂತರ ಹಾಡುಹಗಲೇ ಮನೆಗೆ ನುಗ್ಗಿ 22,74,500 ರೂ. ನಗದು, 130 ಗ್ರಾಂ ಬಂಗಾರದ ಆಭರಣ, 550 ಗ್ರಾಂ ಬೆಳ್ಳಿಯ ಆಭರಣ ಕಳವು ಮಾಡಿದ್ದರು. ಈ ಬಗ್ಗೆ ವೈದ್ಯೆ ತುಂಗಾನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಮಾರ್ಗದರ್ಶನದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಕಳವು ಮಾಡಿದ್ದ ಹಣದಲ್ಲಿ ಸ್ವಲ್ಪ ಹಣವನ್ನು ಆಶ್ರಫ್‌ವುಲ್ಲಾ ಖರ್ಚು ಕೂಡ ಮಾಡಿದ್ದು, ಆತನಿಂದ 22.74 ಲಕ್ಷ ರೂ. ನಗದು, 11.70 ಲಕ್ಷ ರೂ. ಮೌಲ್ಯದ ಬಂಗಾರ ಮತ್ತು 65 ಸಾವಿರ ರೂ. ಮೌಲ್ಯದ ಬೆಳ್ಳಿಯ ಆಭರಣ ಜಪ್ತಿ ಮಾಡಿದ್ದಾರೆ.
ಇನ್‌ಸೆಕ್ಟರ್ ಕೆ.ಟಿ.ಗುರುರಾಜ್, ಸಿಬ್ಬಂದಿಗಳಾದ ಕಿರಣ್‌ಮೋರೆ, ಅರುಣ್‌ಕುಮಾರ, ಮೋಹನ್ ಕುಮಾರ್, ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ರಂಗನಾಥ್, ಎಂ.ಜಿ. ಹರೀಶ್, ಅನುಷಾ, ಚೈತ್ರಾ, ಜಿಲ್ಲಾ ಪೊಲೀಸ್ ಕಚೇರಿ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ಇಂದ್ರೇಶ, ಗುರು, ವಿಜಯ ಹಾಗೂ ಚಾಲಕ ಪುನೀತ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.