

ಮೈಸೂರು: ಸೆಲ್ಫಿ ತೆಗೆದುಕೊಳ್ಳಲು ವಿದೇಶಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ ತೋರಿದ ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಸ್ಪೇನ್ ದೇಶದ ಮಹಿಳೆ ಮರಿಯಾ ನೋಯಲ್ ಕಟಲಡೋ ರೋಡ್ರಿಗ್ಸ್ ಎಂಬವರು ನೀಡಿದ ದೂರಿನ ಮೇರೆಗೆ ಊಬರ್ ಆಟೋ ಚಾಲಕ ರಂಜನ್‌ನನ್ನು ಹೆಬ್ಬಾಳು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಯೋಗ ತರಬೇತಿಗಾಗಿ ಸ್ಪೇನ್ ದೇಶದಿಂದ ಬಂದಿದ್ದ ಮರಿಯಾ ರೋಡ್ರಿಗ್ಸ್, ಹೆಬ್ಬಾಳು ಇನ್ಫೋಸಿಸ್ ಬಳಿ ಬಾಡಿಗೆ ಮನೆಯಲ್ಲಿ ಇದ್ದು, ಗೋಕುಲಂನ ಹೋಗಿ ಬರುತ್ತಿದ್ದರು. ಗಣರಾಜ್ಯೋತ್ಸವ ದಿನದಂದು ಗೋಕುಲಂನಿಂದ ಬೆಳಗ್ಗೆ ತಮ್ಮ ಮನೆಗೆ ತೆರಳಲು ಊಬರ್ ಆಟೋ ಬುಕ್ ಮಾಡಿದ್ದಾರೆ. ಆಟೋ ಚಾಲಕ ರಂಜನ್ ಅವರನ್ನು ತನ್ನ ಆಟೋದಲ್ಲಿ ಕರೆದೊಯ್ಯುವಾಗ ಇನ್ಫೋಸಿಸ್ ಬಳಿ ಸೆಲ್ಫೀ ತೆಗೆಯಲು ಪ್ರಯತ್ನಿಸಿದ್ದಾನೆ. ಆದರೆ ಇದಕ್ಕೆ ಆಕೆ ವಿರೋಧ ವ್ಯಕ್ತಪಡಿಸಿದಾಗ ಚಾಲಕ ರಂಜನ್ ವಿದೇಶಿ ಮಹಿಳೆಯನ್ನು ಹೊರಕ್ಕೆ ಎಳೆಯುವ ಪ್ರಯತ್ನ ಮಾಡಿದ್ದಲ್ಲದೆ, ಅಸಭ್ಯ ವರ್ತನೆ ತೋರಿದ್ದಾನೆ ಎನ್ನಲಾಗಿದೆ. ಬಳಿಕ ಆತನನಿಂದ ತಪ್ಪಿಸಿಕೊಂಡ ಆಕೆ, ಹೆಬ್ಬಾಳು ಪೊಲೀಸರಿಗೆ ದೂರು ನೀಡಿದ್ದರು.