

ಮೈಸೂರು: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಆ.1 ರಿಂದ ದ್ವಿಚಕ್ರ ಹಾಗೂ ತ್ರಿಚಕ್ರ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾ ಗುವುದು ಎಂದು ಸಂಚಾರ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಪರಿಶೀಲನೆಯ ನಂತರ ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಶಪಥ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಬಹುತೇಕರು ಬೈಕ್ ಸವಾರರು. 150 ಸಿಸಿ ವಾಹನಗಳಲ್ಲಿ ಹೆಚ್ಚು ವೇಗದಲ್ಲಿ ಹೋಗಲು ಸಾಧ್ಯವಿಲ್ಲ, ಆಟೋ ರಿಕ್ಷಾದಂತಹ ವಾಹನಗಳ ವೇಗ ಇನ್ನೂ ಕಡಿಮೆ ಇರುತ್ತದೆ. ಎತ್ತಿನಗಾಡಿ, ಕುದುರೆಗಾಡಿಯಂತಹ ಮೋಟಾರ್ ರಹಿತ ವಾಹನಗಳನ್ನು ಬಿಡಲು ಸಾಧ್ಯವೇ ಇಲ್ಲ. ಈ ಬಗ್ಗೆ ಜುಲೈ 12 ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ ಎಂದರು.
ಹೆದ್ದಾರಿಯಲ್ಲಿ ಗ್ರಿಲ್, ವಿದ್ಯುತ್ ಕಂಬಗಳ ಕಳವು ವಿಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಂದೇ ಒಂದು ದೂರನ್ನು ನೀಡಿಲ್ಲ. ಗ್ರಿಲ್‌ಗಳ ಕಳವಿನಿಂದ ಹಸುಗಳು, ಪಾದಚಾರಿಗಳು ರಸ್ತೆಗೆ ಬರುತ್ತಿದ್ದಾರೆ. ಇದರಿಂದಾಗಿ ಅಪಘಾತ ಆಗುತ್ತಿವೆ. ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ನೀಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಯುವಕರು ವೀಲಿಂಗ್ ಮಾಡಿ ನಂತರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದು, ಈ ಪೋಸ್ಟ್‌ಗಳನ್ನು ನೋಡಿಕೊಂಡು ಪ್ರಕರಣ ದಾಖಲಿಸಲಾಗುತ್ತಿದೆ. ಹಿಂದೆಲ್ಲ ಪೊಲೀಸರನ್ನು ಮೂರನೇ ಕಣ್ಣು ಅನ್ನುತ್ತಿದ್ದರು, ಆದರೆ ಇದೀಗ ಪೊಲೀಸರಿಗೆ ಸಾವಿರ ಕಣ್ಣುಗಳು ಇವೆ. ಸಾಮಾಜಿಕ ಜಾಲತಾಣದಿಂದ ಪೊಲೀಸರಿಗೆ ಅನುಕೂಲ ಸಹ ಆಗುತ್ತಿದೆ ಎಂದರು.
ಬಹುತೇಕರು ಸಂಚಾರ ನಿಯಮದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಉದ್ದುದ್ದ ಪೋಸ್ಟ್ ಹಾಕುತ್ತಾರೆ. ಈ ರೀತಿ ಪೋಸ್ಟ್ ಹಾಕುವವರೇ ಸಂಚಾರ ನಿಯಮಗಳನ್ನು ಹೆಚ್ಚಾಗಿ ಉಲ್ಲಂಘಿಸುತ್ತಾರೆ. ಜನರು ಸಂಚಾರ ನಿಯಮ ಉಲ್ಲಂಘಿಸುವುದನ್ನು ಪೊಲೀಸರು ಗಮನಿಸುತ್ತಾರೆ. ಇದರ ಜತೆಗೆ ಇದೀಗ ಎಲ್ಲ ಕಾರುಗಳಲ್ಲಿ ಬೋರ್ಡ್ ಕ್ಯಾಮರಾಗಳು ಇದ್ದು, ಸಾಕಷ್ಟು ಜನರು ಈ ಕ್ಯಾಮರಾದಲ್ಲಿ ಸೆರೆಯಾದ ಸಂಚಾರ ನಿಯಮ ಉಲ್ಲಂಘನೆ ವಿಡಿಯೋಗಳನ್ನು ಪೊಲೀಸರಿಗೆ ನೀಡುತ್ತಿದ್ದು, ಈ ವಿಡಿಯೋಗಳ ಆಧಾರದಲ್ಲಿ ಸಂಬಂಧಿಸಿದವರಿಗೆ ದಂಡ ವಿಧಿಸಲಾಗುತ್ತಿದೆ. ಪೊಲೀಸರ ಕಣ್ಣು ತಪ್ಪಿಸುವುದೇ ಬೈಕ್ ಸವಾರರು, ವಾಹನ ಚಾಲಕರ ಸಾಧನೆ ಆಗಬಾರದು. ದಂಡ ಹಾಕುವುದಕ್ಕಿಂತ ಜೀವ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.