

ಮೈಸೂರು: ಮೈಸೂರಿನ ಲಿಂಗದೇವರು ಕೊಪ್ಪಲಿನಲ್ಲಿ ಶುಕ್ರವಾರ ಗೂಡ್ಸ್ ಆಟೋ ಮತ್ತು ಬೈಕ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಒಬ್ಬ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತಿಬ್ಬರು ಗಾಯಗೊಂಡಿದ್ದಾರೆ.
ಸ್ವಾಮಿಗೌಡ (30) ಮೃತರು. ಮಂಜು ಮತ್ತು ಕುಮಾರ್ ಎಂಬುವರಿಗೆ ಗಂಭೀರ ಗಾಯವಾಗಿದೆ. ಇವರು ಮೈಸೂರು ತಾಲೂಕಿನ ದೊಡ್ಡಮಾರಗೌಡನಹಳ್ಳಿಯ ನಿವಾಸಿಗಳು
ಈ ಮೂವರು ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವಾಗ ಎಕ್ಸೆಲ್ ಪಬ್ಲಿಕ್ ಸ್ಕೂಲ್ ವೃತ್ತದ ಬಳಿ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಪಘಾತ ನಡೆದ ಬಳಿಕ ಪರಾರಿಯಾಗಿದ್ದ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ವಿ.ವಿ ಪುರಂ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.