

ಕೊಪ್ಪಳ : ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 60ರಲ್ಲಿ ಮಂಗಳವಾರ ಸಂಜೆ ಆಟೋ ಪಟ್ಟಲಿಯಾಗಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕೊಪ್ಪಳ ತಾಲೂಕಿನ ಬೂದಗುಂಪಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಮಂಗಳವಾರ ಬೂದಗುಂಪಾ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಕ್ಕೆಂದು ಕೊಪ್ಪಳಕ್ಕೆ ಆಗಮಿಸಿದ್ದರು. ಸುರತ ವಾಹನದಲ್ಲಿ ಮಕ್ಕಳನ್ನು ಕಳಿಸುವ ಬದಲು ಗೂಡ್ಸ್ ವಾಹನದಲ್ಲಿ 40ಕ್ಕೂ ಹೆಚ್ಚು ಮಕ್ಕಳನ್ನು ಕರೆತಂದಿದ್ದಾರೆ. ಕ್ರೀಡಾಕೂಟ ಮುಗಿಸಿಕೊಂಡು ವಾಪಸ್ ತೆರಳುವಾಗ ರಸ್ತೆಯಲ್ಲಿ ಆರ್ಟಿಒ ಅಧಿಕಾರಿಗಳು ಹೋಮ್ ಗಾರ್ಡ್ ಅಧಿಕಾರಿಗಳ ಸಹಾಯದಿಂದ ವಾಹನ ನಿಲ್ಲಿಸುವಂತೆ ಕೈ ಮಾಡಿದ್ದಾರೆ.
ಇದರಿಂದ ಹೆದರಿದ ಆಟೋ ಚಾಲಕ ಅಡ್ಡಾದಿಡ್ಡಿ ವಾಹನ ಓಡಿಸಿದ್ದಾನೆ. ಆಯ ತಪ್ಪಿ ಆಟೋ ಪಲ್ಟಿಯಾಗಿದೆ. 30ಕ್ಕೂ ಹೆಚ್ಚು ಮಕ್ಕಳಿಗೆ ಗಾಯವಾಗಿದೆ. ಸ್ಥಳದಲ್ಲಿದ್ದ ಸಾರ್ವಜನಿಕರು ಮಕ್ಕಳು ಅವಡಕ್ಕೆ ಕಾರಣವಾದ ಗೃಹರಕ್ಷ ಸಿಬ್ಬಂದಿಗೆ ಥಳಿಸಲು ಮುಂದಾಗಿದ್ದಾರೆ. ಈ ವೇಳೆ ಹೊಲದಲ್ಲಿ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಆರ್ಟಿಒ ಇನ್ಸಪೆಕ್ಟರ್ ಮಕ್ಕಳೊಂದಿಗೆ ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. ಮಕ್ಕಳ ತಲೆ, ಕೈ, ಕಾಲು, ಕಣ್ಣಿನ ಭಾಗ, ಎದೆ ಎಲುಬಿಗೆ ಗಾಯಗಳಾಗಿವೆ. ಗಂಭೀರ ಗಾಯ ಹಾಗೂ ಪ್ರಾಣಾಪಾಯ ಸಂಭವಿಸಿಲ್ಲ. ವಾಹನ ಚಾಲಕನಿಗೂ ಗಾಯಗಳಾಗಿವೆ.
ವಿಷಯ ತಿಳಿದು ಶಾಸಕ ರಾಘವೇಂದ್ರ ಹಿಟ್ನಾಳ, ಬಿಇಒ ಶಂಕ್ರಯ್ಯ ಟಿ.ಎಸ್., ಡಿವೈಎಸ್ಪಿ ಮುತ್ತಣ್ಣ ಸರವಗೋಳ, ಸಿಪಿಐ ಸುರೇಶ ಡಿ., ನಗರಠಾಣೆ ಪಿಐ ಜಯಪ್ರಕಾಶ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ್ ಹಾಗೂ ಇತರ ಪದಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಿದರು. ಮಕ್ಕಳ ಅಪಘಾತ ಸುದ್ದಿ ಕೇಳಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ಆಸ್ಪತ್ರೆಗೆ ಧಾವಿಸಿದರು. ಇದರಿಂದ ಕೆಲ ಕಾಲ ಜಿಲ್ಲಾಸ್ಪತ್ರೆಯಲ್ಲಿ ಗದ್ದಲ ಉಂಟಾಯಿತು. ಕೊಪ್ಪಳ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.