

ತುಮಕೂರು : ಗ್ರಾಮ್ಯ ಭಾಷೆಯ ಸಂಸರ್ಗ ನನ್ನನ್ನು ಇಷ್ಟು ದೂರಕ್ಕೆ ಕರೆದುಕೊಂಡು ಬಂದು ನಿಲ್ಲಿಸಿದೆ ಎಂದು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡ ಹೇಳಿದರು.
ನಗರದ ಕುಂಚಿಟಿಗ ಸಮುದಾಯ ಭವನದಲ್ಲಿ ಬುಧವಾರ ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತುಮಕೂರಿನ ಮಣ್ಣಿನ ಗುಣ ನನ್ನಲ್ಲಿ ಸೇರಿಕೊಂಡಿದೆ. ದೇಸಿ ಭಾಷೆ ಹಾಗೂ ಇಲ್ಲಿನ ನಾಣ್ಣುಡಿ, ನುಡಿಗಟ್ಟುಗಳನ್ನು ನನ್ನ ಸಾಹಿತ್ಯ ಕೃಷಿಯಲ್ಲಿ ಸಮೃದ್ಧವಾಗಿ ಬಳಸಿದ್ದರಿಂದಲೇ ನಾಡಿನ ಕೋಟ್ಯಂತರ ಜನ ಇಷ್ಟಪಟ್ಟು ನನ್ನ ಎತ್ತಿ ಮೆರೆಸಿದರು ಎಂದರು.
ಶಿಥಿಲಗೊಳ್ಳುತ್ತಿವೆ ಸಂಬಂಧಗಳು: ಇತ್ತೀಚಿನ ದಿನಗಳಲ್ಲಿ ಸ್ನೇಹ, ವಿಶ್ವಾಸಗಳು ಮರೆಯಾಗಿ ಸಂಬಂಧಗಳು ಶಿಥಿಲವಾಗುತ್ತಿವೆ. ಅವನು ಮತ್ತು ಮೊಬೈಲ್, ಅವಳು ಮತ್ತು ಮೊಬೈಲ್ ಎನ್ನುವಂತಾಗಿದ್ದು ಮೊಬೈಲ್ ದೊಡ್ಡ ಪಿಡುಗಾಗಿದೆ. ಮನುಷ್ಯ, ಮನುಷ್ಯನ ನಡುವಿನ ಸಂಬಂಧಗಳು ಶಿಥಿಲಗೊಳ್ಳುತ್ತಿರುವುದರಿಂದ ಅನೇಕ ವೈಫಲ್ಯಗಳನ್ನು ಕಾಣುವಂತಾಗಿದೆ ಎಂದು ಹೇಳಿದರು.
ಮನುಷ್ಯನ ಮಾನವೀಯ ಮೌಲ್ಯಗಳನ್ನು ಸಮಾಧಿ ಮಾಡಿ ಅದರ ಗೋರಿಯ ಮೇಲೆ ಅಹಂ ಹೆಚ್ಚಿಸಿಕೊಂಡಿದ್ದರ ಪರಿಣಾಮ ನಮ್ಮ ಮನೆಯವರೇ ನಮಗೆ ಪರಕೀಯರಾಗುತ್ತಿದ್ದಾರೆ. ಇದು ಅಪಾಯದ ಸಂಕೇತ. ಕಳೆದ 9 ತಿಂಗಳ ಕರೊನಾದಿಂದ 83 ಕಥೆಗಳನ್ನು ರಚಿಸಲು ಸಾಧ್ಯವಾಯಿತು. ಇದರಲ್ಲಿ ಜಿಲ್ಲೆಗೆ ಸಂಬಂಧಿಸಿದ 48 ಕಥೆಗಳಿವೆ. ನಾನು ಓಡಾಡಿದ, ಕಲಿತ ತುಮಕೂರು ಭಾಗದ ಬಿಟ್ಟನಕುರಿಕೆ, ಬೆಲ್ಲದಮಡು ಸೇರಿದ ಅನೇಕ ಗ್ರಾಮಗಳನ್ನು ಒಳಗೊಂಡ ಜೀವಂತ ಚಿತ್ರಣಗಳು ಇಲ್ಲಿವೆ. ಮಧ್ಯವರ್ತಿ ಎಂಬ ಹೆಸರಿನಲ್ಲಿ ಈ ಕಥಾ ಸಂಕಲನವನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದರು.
ಪ್ರಕೃತಿಯನ್ನೇ ಕಾವ್ಯದ ವಸ್ತುವಾಗಿಸಿಕೊಂಡ ಡಾ.ದೊಡ್ಡರಂಗೇಗೌಡ ಅವರನ್ನು ಪದ್ಮಶ್ರೀ ಸೇರಿ ಹಲವಾರು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಸರಳತೆಯಿಂದ ನಿಷ್ಕಾಮವಾಗಿ ಸಾಹಿತ್ಯ ಸೇವೆ ಮಾಡಿದ ಅವರನ್ನು ವಿಧಾನಪರಿಷತ್ ಸದಸ್ಯ ಸ್ಥಾನದವರೆಗೆ ತಂದು ಕೂರಿಸಿದೆ ಎಂದು ಗಡಿನಾಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕುಂಚಿಟಿಗ ವಿದ್ಯಾಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷ ಆರ್.ಕಾಮರಾಜು, ಜಿಲ್ಲೆಯ ಮಧುಗಿರಿ ತಾಲೂಕಿನ ಕುರುಬರಹಳ್ಳಿಯಲ್ಲಿ 1946ರ ಫೆ.7 ರಂದು ಜನಿಸಿದ ಡಾ.ದೊಡ್ಡರಂಗೇಗೌಡರು, ಈ ಜಿಲ್ಲೆಯ ಹೆಮ್ಮೆಯ ಮತ್ತು ಸ್ವಾಭಿಮಾನದ ಪ್ರತೀಕ. ಸಾಹಿತ್ಯ, ಗೀತರಚನೆಯ ಜತೆಗೆ ಬಹುಮುಖ ಪ್ರತಿಭೆ. ಇವರು ಹಾವೇರಿಯಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಯೋಜನೆಗೊಂಡಿದ್ದಾರೆ. ಹಾಗಾಗಿ ಈ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದರು. ಕೆಂಪೇಗೌಡ ಸಹಕಾರ ಬ್ಯಾಂಕ್ ಅಧ್ಯಕ್ಷ ಪ್ರೊ.ಎಚ್.ಎಸ್‌ಶೇಷಾದ್ರಿ, ಎಸ್.ನಾಗಣ್ಣ, ಪ್ರೊ.ಕೆ.ಚಂದ್ರಣ್ಣ ಮತ್ತಿತರರು ಉಪಸ್ಥಿತರಿದ್ದರು.
ಶಿವಕುಮಾರ ಶ್ರೀಗಳ ಪ್ರಭಾವ ನನ್ನಮೇಲಿದೆ : ತುಮಕೂರು ಜಿಲ್ಲೆಗೆ ಬಂದರೆ ಹೆಣ್ಣುಮಕ್ಕಳು ತವರು ಜಿಲ್ಲೆಗೆ ಬಂದಷ್ಟೇ ಸಂತಸ ನನಗೆ. ಇದು ಪುಣ್ಯಸ್ಥಳ. ನಮ್ಮೆಲ್ಲರ ಭಾರತರತ್ನ ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳು ನನ್ನ ಬಾಲ್ಯದಲ್ಲಿ ದಟ್ಟವಾದ ಪ್ರಭಾವ ಬೀರಿದ್ದಾರೆ. ನನ್ನ ಮೊಟ್ಟಮೊದಲ ಕಾದಂಬರಿ ಸಿದ್ಧವಾಗಿದ್ದು ಇದೇ ನೆಲದಲ್ಲಿ, ನನ್ನ ಗುರುಗಳಾದ ಪ್ರೊ.ಎಚ್.ಜಿ.ಸಣ್ಣಗುಡ್ಡಯ್ಯ, ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಹಾಗೂ ಕವಿ ವಿ.ಚಿಕ್ಕವೀರಯ್ಯ ಅವರನ್ನು ಮರೆಯಲು ಸಾಧ್ಯವೇ ಇಲ್ಲ. ಅವರೆಲ್ಲರ ಪ್ರೀತಿಯೇ ನಾನು ಸಮಾಜಮುಖಿ ಗೀತೆಗಳನ್ನು ರಚಿಸಲು ಕಾರಣವಾಯಿತು. ಈ ಸನ್ಮಾನದಿಂದ ಉಬ್ಬಿ ಹೋಗಿಲ್ಲ, ಕೊಬ್ಬಿ ಹೋಗಿಲ್ಲ ಎಂದು ದೊಡ್ಡರಂಗೇಗೌಡ ಹೇಳಿದರು.
ಕುಂಚಿಟಿಗ ಸಮಾಜ ಪಲ್ಲವ ಮನೆತನದಿಂದ ಬಂದಂತಹ ಸಾಂಸ್ಕೃತಿಕ ವ್ಯವಸ್ಥೆ, ಕುಂಚಿಟಿಗರು ಅಂದರೆ ವೀರರು, ಶೂರರು ಅಂತ. ಸೌಜನ್ಯಕ್ಕೆ ಹೆಸರುವಾಸಿಯಾದವರು. ಡಾ.ಸಿ.ಸೋಮಶೇಖರ್, ಅಧ್ಯಕ್ಷ, ಗಡಿನಾಡ ಅಭಿವೃದ್ಧಿ ಪ್ರಾಧಿಕಾರ